Trending

7ವರ್ಷದ ಬಾಲಕಿ ಕೈಗೆ ಕಚ್ಚಿದ ಕಪ್ಪು ಜೇಡ.. ಆಸ್ಪತ್ರೆ ದಾರಿಯಲ್ಲೇ ಕೊನೆಯುಸಿರು

Spread the love

ಗುವಾಹಟಿ: ಕಪ್ಪು ಜೇಡ (black coloured spider) ಕಚ್ಚಿ ಏಳು ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿರುವ ಘಟನೆಯೊಂದು ಪೂರ್ವ ಅಸ್ಸಾಂನ ತಿನ್ಸುಕಿಯಾ ಜಿಲ್ಲೆಯಲ್ಲಿ ನಡೆದಿದೆ.

ಬಿದಿರಿನ ಬುಟ್ಟಿಯಲ್ಲಿದ್ದ ಕೋಳಿ ಮೊಟ್ಟೆಗಳನ್ನು ತೆಗೆಯಲು ಹೋದ ಸಂದರ್ಭ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮನೆಯಲ್ಲಿ ಕೋಳಿಗಳು ಮೊಟ್ಟೆ ಇಟ್ಟಿದ್ದು ಅದನ್ನು ತೆಗೆಯಲು ಹೋದ ಬಾಲಕಿ ಮುಚ್ಚಿಟ್ಟಿದ್ದ ಬಿದಿರಿನ ಬುಟ್ಟಿಯನ್ನು ತೆಗೆದಿದ್ದಾಳೆ ಈ ವೇಳೆ ಬುಟ್ಟಿಯಲ್ಲಿದ್ದ ಕಪ್ಪು ಬಣ್ಣದ ಜೇಡ ಬಾಲಕಿಯ ಕೈಗೆ ಕಚ್ಚಿದೆ, ಕಚ್ಚಿದ ಹೊಡೆತಕ್ಕೆ ಬಾಲಕಿ ಜೋರಾಗಿ ಕಿರುಚಿಕೊಂಡಿದ್ದಾಳೆ ಇದನ್ನು ಕೇಳಿ ಮನೆಮಂದಿ ಓಡಿ ಬಂದು ನೋಡಿದಾಗ ಬಾಲಕಿಯ ಕೈಗೆ ಜೇಡ ಕಚ್ಚಿರುವುದು ಗೊತ್ತಾಗಿದೆ.

ಮೊದಲಿಗೆ ಅಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳದ ಮನೆಮಂದಿ ಮನೆ ಮದ್ದು ಹಚ್ಚಿದ್ದಾರೆ ಆದರೆ ಕ್ರಮೇಣ ಬಾಲಕಿಯ ಕೈ ಊದಿಕೊಂಡಿದೆ ಇದರಿಂದ ಗಾಬರಿಗೊಂಡ ಪೋಷಕರು ಬಾಲಕಿಯನ್ನು ಕರೆದುಕೊಂಡು ಪಕ್ಕದಲ್ಲಿರುವ ಔಷಧಾಲಯಕ್ಕೆ ತೆರಳಿದ್ದಾರೆ ಅಲ್ಲಿ ಪರಿಶೀಲಿಸಿದ ಸಿಬ್ಬಂದಿ ಆಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಿದ್ದಾರೆ.

ಬಳಿಕ ಪೋಷಕರು ಬಾಲಕಿಯನ್ನು ತಿನ್ಸುಕಿಯಾದಲ್ಲಿರುವ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಿದ್ದಾರೆ ಆದರೆ ದುರದೃಷ್ಟವಶಾತ್ ಆಸ್ಪತ್ರೆ ದಾರಿ ಮಧ್ಯೆ ಬಾಲಕಿ ಕೊನೆಯುಸಿರೆಳೆದಿದ್ದಾಳೆ. ಆಸ್ಪತ್ರೆಯಲ್ಲಿ ಪರಿಶೀಲಿಸಿದ ವೈದ್ಯರು ಬಾಲಕಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಘಟನೆ ಕುರಿತು ಪೊಲೀಸರು ಇದೊಂದು ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಾಲಕಿಯ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಿದ್ದಾರೆ. ಜೊತೆಗೆ ಬಾಲಕಿಗೆ ಕಚ್ಚಿದ ಜೇಡವನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿದ್ದು ಯಾವ ಪ್ರಭೇದಕ್ಕೆ ಸೇರಿದ್ದಾಗಿದೆ ಎಂಬುದನ್ನು ಪತ್ತೆಹಚ್ಚುವ ಕಾರ್ಯ ನಡೆಸಲಾಗುತ್ತಿದೆ.

[pj-news-ticker]