Trending

ಬಡ ವಿದ್ಯಾರ್ಥಿನಿಯ ಶಿಕ್ಷಣಕ್ಕೆ ಹಣಕಾಸು ನೆರವು ನೀಡಿದ ರಿಷಭ್​​ ಪಂತ್

Spread the love

ಬಾಗಲಕೋಟೆ: ಪಿಯುಸಿಯಲ್ಲಿ ಉತ್ತಮ ಅಂಕಗಳಿಸಿದರೂ ಪದವಿ ಪ್ರವೇಶಾತಿಗೆ ಹಣವಿಲ್ಲದೆ ಪರದಾಡುತ್ತಿದ್ದ ಜಿಲ್ಲೆಯ ಓರ್ವ ವಿದ್ಯಾರ್ಥಿನಿಗೆ ಟೀಂ ಇಂಡಿಯಾ ಕ್ರಿಕೆಟರ್ ರಿಷಭ್​​ ಪಂತ್ ನೆರವಾಗಿದ್ದಾರೆ.

ಬೀಳಗಿ ತಾಲೂಕಿನ ರಬಕವಿ ಗ್ರಾಮದ ಕು.ಜ್ಯೋತಿ ಕಣಬೂರ ಅವರು ಪಿಯುಸಿಯಲ್ಲಿ ಶೇ 83 ಅಂಕ ಗಳಿಸಿದ್ದರು. ಉನ್ನತ ಶಿಕ್ಷಣ ಪಡೆಯಬೇಕೆಂದು ಕನಸು ಕಂಡಿದ್ದರು. ಆದರೆ, ಬಡತನ ಹಾಗೂ ಆರ್ಥಿಕ ತೊಂದರೆ ಕಾಡತೊಡಗಿತು. ತಂದೆ ತೀರ್ಥಯ್ಯ ಗ್ರಾಮದಲ್ಲಿ ಚಿಕ್ಕ ಚಹಾ ಅಂಗಡಿ ನಡೆಸುತ್ತಿದ್ದು, ಮಗಳ ಕಲಿಕೆಗೆ ಹಣಕಾಸು ಒದಗಿಸಲು ಕಷ್ಟಪಡುತ್ತಿದ್ದರು.

ಈ ಸಂದರ್ಭದಲ್ಲಿ ರಿಷಭ್​​ ಪಂತ್‌ಗೆ ಆತ್ಮೀಯರಾಗಿರುವ ಗುತ್ತಿಗೆದಾರ ಅನಿಲ್​ ಹುಣಶಿಕಟ್ಟಿ ಅವರಲ್ಲಿ ಜಮಖಂಡಿ ಬಿಎಲ್‌ಡಿಇ ಸಂಸ್ಥೆಯ ಕಾಲೇಜಿನಲ್ಲಿ ಮಗಳಿಗೆ ಬಿಸಿಎಗೆ ಸೀಟ್ ಕೊಡಿಸುವಂತೆ ಮನವಿ ಮಾಡಿದ್ದಾರೆ. ಅವರು, ಸೀಟು ಕೊಡಿಸುವ ಜೊತೆಗೆ ಆರ್ಥಿಕ ನೆರವು ಒದಗಿಸುವುದಕ್ಕೂ ಪ್ರಯತ್ನಿಸುವ ಭರವಸೆ ನೀಡಿದ್ದರು.

ಅನಿಲ್​ ಅವರು ಈ ವಿಚಾರವನ್ನು ರಿಷಭ್​​ ಪಂತ್ ಗಮನಕ್ಕೆ ತಂದಿದ್ದಾರೆ. ಕೂಡಲೇ ನೆರವಿಗೆ ಬಂದ ಪಂತ್, ಜು.17ರಂದು ಕಾಲೇಜಿನ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡಿದ್ದಾರೆ. ವಿದ್ಯಾರ್ಥಿನಿ ಜ್ಯೋತಿಯ ಮೊದಲ ಸೆಮಿಸ್ಟರ್‌ನ 40 ಸಾವಿರ ರೂ. ಶುಲ್ಕವನ್ನು ಅವರು ಭರಿಸಿದ್ದಾರೆ.

“ನನಗೆ ಬಿಸಿಎ ಓದಬೇಕೆಂದು ಬಹಳ ಆಸೆ ಇತ್ತು. ಆದರೆ ನಮ್ಮ ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲ. ಹೀಗಾಗಿ ನಮ್ಮ ಊರಿನ ಅನಿಲ್​ ಹುಣಸಿಕಟ್ಟಿ ಎಂಬವರ ಬಳಿ ಸಹಾಯ ಕೇಳಿದೆವು. ಅವರು ಸ್ನೇಹಿತರ ಮೂಲಕ ರಿಷಭ್​​ ಪಂತ್​ ಬಳಿ ಸಹಾಯಕ್ಕೆ ಮನವಿ ಮಾಡಿದ್ದರು. ನಮಗೆ ​ಪಂತ್ ಅವರು​ 40 ಸಾವಿರ ರೂಪಾಯಿ ಸಹಾಯ ಮಾಡಿದ್ದಾರೆ.

ಇದರಿಂದ ನನಗೆ ಬಹಳಷ್ಟು ನೆರವಾಗಿದೆ. ಅವರಿಗೆ ದೇವರು ಒಳ್ಳೆಯದು ಮಾಡಲಿ. ಇನ್ನಷ್ಟು ಯಶಸ್ಸು ಸಿಗಲಿ. ನನ್ನಂತಹ ಅನೇಕ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಲಿ. ಹೆಣ್ಣು ಮಕ್ಕಳಿಗೆ ಎಲ್ಲರೂ ಶಿಕ್ಷಣ ಕೊಡಿಸುವಂತಾಗಲಿ” ಎಂದು ವಿದ್ಯಾರ್ಥಿನಿ ಕಲಬೂರುಮಠ ಹೇಳಿದರು.

“ರಿಷಭ್​​ ಪಂತ್​ ಅವರ​​ ಮ್ಯಾನೇಜರ್​ ನನ್ನ​ ಕ್ಲಾಸ್​ಮೇಟ್​. ಈ ಹಿಂದೆ ಪಂತ್​ ಅವರಿಂದ ಓರ್ವ ವಿದ್ಯಾರ್ಥಿನಿಗೆ ಸಹಾಯ ಮಾಡಿಸಿದ್ದೆ. ಈಗ ನಮ್ಮೂರಿನ ವಿದ್ಯಾರ್ಥಿನಿ ನನ್ನ ಭೇಟಿಯಾಗಿ ಶಿಕ್ಷಣದ ನೆರವು ಕೇಳಿದ್ದಳು. ಇದನ್ನು ಪಂತ್​ ಅವರ ಗಮನಕ್ಕೆ ತಂದು ಸಹಾಯ ಮಾಡಿಸುವುದಾಗಿ ಭರವಸೆ ನೀಡಿದ್ದೆ. ಪಂತ್ ವಿಷಯ ತಿಳಿದ ತಕ್ಷಣ​ ಒಂದು ವರ್ಷದ ಶುಲ್ಕ ನೀಡಿದ್ದಾರೆ. ‌ಒಟ್ಟು ಮೂರು ವರ್ಷಗಳ ಕೋರ್ಸ್​ ಇದ್ದು, ಮುಂದಿನ ವರ್ಷ ಮತ್ತೆ ನೆರವು ಕೇಳುತ್ತೇವೆ” ಎಂದು ಗುತ್ತಿಗೆದಾರ ಅನಿಲ್​ ಹುಣಶಿಕಟ್ಟಿ ತಿಳಿಸಿದರು.

[pj-news-ticker]