ಬೆಂಗಳೂರು: ಮನೆಕೆಲಸದ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಶಿಕ್ಷೆ ಪ್ರಮಾಣವನ್ನು ಶನಿವಾರ (ಆ.02) ಮಧ್ಯಾಹ್ನ 2.45ಕ್ಕೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಪ್ರಕಟಿಸಲಿದ್ದಾರೆ.
55 ವರ್ಷದ ಮಹಿಳೆಯ ದೌರ್ಜನ್ಯ ಪ್ರಕರಣದ ವಿಚಾರಣೆ ನಡೆಸಿದ್ದ ಕೋರ್ಟ್ ಶುಕ್ರವಾರ ಆರೋಪಿ ಪ್ರಜ್ವಲ್ ರೇವಣ್ಣ ದೋಷಿ ಎಂದು ತೀರ್ಪು ನೀಡಿತ್ತು.
ಶನಿವಾರ ಬೆಳಗ್ಗೆ ಶಿಕ್ಷೆಯ ಪ್ರಮಾಣ ಪ್ರಕಟ ಮಾಡುವ ಮೊದಲು ನ್ಯಾಯಾಲಯವು ವಾದ- ಪ್ರತಿವಾದ ಆಲಿಸಿತು. ಗರಿಷ್ಠ ಶಿಕ್ಷೆ ವಿಧಿಸಬೇಕೆಂದು ಪ್ರಾಸಿಕ್ಯೂಷನ್ ಪರ ವಕೀಲ ಅಶೋಕ್ ನಾಯ್ಕ್ ವಾದ ಮಂಡಿಸಿದರೆ, ಶಿಕ್ಷೆಯ ಪ್ರಮಾಣ ಕಡಿಮೆ ಮಾಡುವಂತೆ ಪ್ರಜ್ವಲ್ ಪರ ವಕೀಲೆ ನಳಿನಾ ಮಾಯಗೌಡ ಮನವಿ ಮಾಡಿದರು.
ಮಹಿಳೆ ಶಿಕ್ಷಿತಳಲ್ಲ, ಬಡ ಕೂಲಿ ಕೆಲಸದ ಮಹಿಳೆ, ಆಕೆಗೆ ಯಾವುದೇ ಸ್ಥಾನಮಾನವಲ್ಲ. 10 ಸಾವಿರ ರೂ ಸಂಬಳಕ್ಕೆ ಅವರು ಕೆಲಸ ಮಾಡುತ್ತಿದ್ದರು. ವಿಡಿಯೋ ನೋಡಿದರೆ ಕೃತ್ಯದ ತೀವ್ರತೆ ಸ್ಪಷ್ಟವಾಗಿದೆ. ಈತನಿಗೆ ಕಠಿಣ ಶಿಕ್ಷೆ ನೀಡಿ ಸಮಾಜಕ್ಕೆ ಸಂದೇಶ ನೀಡಬೇಕು ಎಂದು ಬಿಎನ್ ಜಗದೀಶ್ ವಾದ ಮಂಡಿಸಿದರು.
ಪ್ರಜ್ವಲ್ ಪರ ವಾದ ಮಂಡಿಸಿದ ನಳಿನಾ ಮಾಯಗೌಡ ಅವರು, ಯುವ ಸಂಸದನಾಗಿ ಅವರು ಹೆಸರು ಮಾಡಿದ್ದಾರೆ. ಹಣ ಮಾಡಲೆಂದು ಆತ ರಾಜಕಾರಣಕ್ಕೆ ಸೇರಿಲ್ಲ. ಸಂತ್ರಸ್ಥೆಗಿಂತ ಅಪರಾಧಿಗೆ ಹೆಚ್ಚಿನ ಹಾನಿಯಾಗಿದೆ ಎಂದರು.
ಬಳಿಕ ಮಾತನಾಡಿದ ಪ್ರಜ್ವಲ್, ಕೆಲವು ಮಹಿಳೆಯರೊಂದಿಗೆ ಕೃತ್ಯ ಮಾಡಿದ್ದೆ. ಆದರೆ ನಾನು ಸಂಸದನಾಗಿ ಇರುವ ಸಮಯದಲ್ಲಿ ಯಾವೊಬ್ಬ ಮಹಿಳೆಯೂ ಅತ್ಯಚಾರದ ಬಗ್ಗೆ ದೂರು ನೀಡಿಲ್ಲ. ಮತದಾನಕ್ಕೆ ಆರು ದಿನ ಇರುವಾಗ ಆರೋಪ ಮಾಡಲಾಯಿತು. ಯಾವ ಮಹಿಳೆಯೂ ತಾನು ರೇಪ್ ಮಾಡಿದ್ದೇನೆ ಎಂದು ಹೇಳಲು ಮುಂದೆ ಬಂದಿರಲಿಲ್ಲ, ಆದರೆ ಪೊಲೀಸರು ಇಂತಹ ಕೆಲಸ ಮಾಡಿದ್ದಾರೆ. ಕೋರ್ಟ್ ಆದೇಶಕ್ಕೆ ತಲೆ ಬಾಗುತ್ತೇನೆ ಎಂದರು.
