ಬೆಳ್ತಂಗಡಿ(ದಕ್ಷಿಣ ಕನ್ನಡ): ಧರ್ಮಸ್ಥಳ ಗ್ರಾಮದ ವಿವಿಧೆಡೆ ತಾನು ಹಲವು ಮೃತದೇಹಗಳನ್ನು ಹೂತು ಹಾಕಿರುವುದಾಗಿ ಅನಾಮಧೇಯ ವ್ಯಕ್ತಿಯೋರ್ವ ನೀಡಿದ ದೂರು ಆಧರಿಸಿ, ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಪ್ರಕರಣದ ತನಿಖೆ ನಡೆಸುತ್ತಿದೆ. ಇದೀಗ ದೂರುದಾರ ಗುರುತಿಸಿರುವ ಸ್ಥಳಗಳನ್ನು ಎಸ್‌ಐಟಿ, ಕಾರ್ಮಿಕರ ಮೂಲಕ ಅಗೆಯುವ ಕೆಲಸ ಶುರುಮಾಡಿದೆ.
ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಾನು ಮೃತದೇಹಗಳನ್ನು ಹೂತು ಹಾಕಿದ್ದೇನೆ ಎಂದು 13 ಸ್ಥಳಗಳನ್ನು ಸೋಮವಾರ(ನಿನ್ನೆ) ದೂರುದಾರ ಗುರುತಿಸಿದ್ದನು. ಆ ಸ್ಥಳಗಳಿಗೆ ಇಂದು ಕಾರ್ಮಿಕರನ್ನು ಕರೆತಂದ ಎಸ್ಐಟಿ, ಅಗೆಯುವ ಪ್ರಕ್ರಿಯೆ ಪ್ರಾರಂಭಿಸಿತು. ಕಾರ್ಮಿಕರು ಹಾರೆ, ಪಿಕಾಸುಸಹಿತ ಸಾಮಗ್ರಿಗಳೊಂದಿಗೆ ಸ್ಥಳಕ್ಕೆ ಬಂದಿದ್ದರು.
ಎಸ್ಐಟಿ ತನಿಖಾಧಿಕಾರಿ ಅನುಚೇತ್, ಆಂತರಿಕ ಭದ್ರತಾ ವಿಭಾಗದ ಎಸ್ಪಿ ಜಿತೇಂದ್ರ ಕುಮಾರ್ ದಯಾಮ ಹಾಗೂ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಮಂಗಳೂರು ವಲಯದ ಎಸ್ಪಿ ಸಿ.ಎ.ಸೈಮನ್, ಪುತ್ತೂರು ಎ.ಸಿ ಸ್ಟೆಲ್ಲಾ ವರ್ಗೀಸ್ ಹಾಗೂ ಮತ್ತಿತರ ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದಾರೆ.
ಮಂಗಳೂರು ಕೆಎಂಸಿ ಆಸ್ಪತ್ರೆಯ ವೈದ್ಯರಾದ ಡಾ.ಜಗದೀಶ್ ರಾವ್ ಮತ್ತು ಡಾ.ರಶ್ಮಿ ನೇತೃತ್ವದ ತಂಡವನ್ನು ಎಸ್ಐಟಿ ಸ್ಥಳಕ್ಕೆ ಕರೆಸಿದೆ.
