ಹುಬ್ಬಳ್ಳಿ: ಕೂಡಲಸಂಗಮ ಪಂಚಮಸಾಲಿ ಪೀಠಕ್ಕೆ ಪರ್ಯಾಯ ಪೀಠಾಧಿಪತಿಗಳ ನೇಮಕಕ್ಕೆ ಚಿಂತನೆ ನಡೆದಿದ್ದು, ಶೀಘ್ರವೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಹೇಳಿದರು.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವಜಯ ಮೃತ್ಯುಂಜಯ ಶ್ರೀಗಳಿಗೆ 2019ರಲ್ಲಿ ಟ್ರಸ್ಟ್ನಿಂದ ನೋಟಿಸ್ ನೀಡಿದಾಗ ತಿದ್ದಿಕೊಳ್ಳುವುದಾಗಿ ಲಿಖಿತವಾಗಿ ತಿಳಿಸಿದ್ದರು. ಅಷ್ಟಾಗ್ಯೂ ಕೂಡ ಅವರು ತಮ್ಮ ನಡವಳಿಕೆ ತಿದ್ದಿಕೊಳ್ಳದೇ ಒಂದು ಪಕ್ಷಕ್ಕೆ, ಕೆಲವು ನಾಯಕರ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ದೂರಿದರು.
ಪೀಠಾಧಿಪತಿಯಾದವರು ಮಠದಲ್ಲಿದ್ದುಕೊಂಡು ಧರ್ಮ ಪ್ರಚಾರ, ಬಸವ ತತ್ವದ ಅನುಷ್ಠಾನಕ್ಕೆ ಒತ್ತು ನೀಡಬೇಕು. ಆದರೆ ಮೃತ್ಯುಂಜಯ ಶ್ರೀಗಳು ಲೋಕ ಸಂಚಾರಿಯಾಗಿ ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿಯಲ್ಲಿ ಒಂದೊಂದು ಮನೆ ಮಾಡಿಕೊಂಡು ಧರ್ಮದ ಕಾರ್ಯ ಮರೆತಿದ್ದಾರೆ. ಅಲ್ಲದೇ ಮಲಪ್ರಭಾ ಕಾಲುವೆ ದಡದಲ್ಲಿ ಹೊಸ ಮಠ ಕಟ್ಟಿಸಿಕೊಳ್ಳುವುದಾಗಿ ತಿಳಿಸಿದ್ದಾರೆ. ಅಲ್ಲಿ ಸಮಾಜದ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದಾಗಿ ಹೇಳಿದ್ದಾರೆ. ಇದನ್ನು ಟ್ರಸ್ಟ್ ಸ್ವಾಗತಿಸುತ್ತದೆ. ಅವರು ಪರ್ಯಾಯ ಮಠ ಆರಂಭಿಸುದಾದರೇ ಆರಂಭಿಸಲಿ ಅದಕ್ಕೆ ನಮ್ಮ ಅಭ್ಯಂತರವಿಲ್ಲ ಎಂದರು.
ಶ್ರೀಗಳು ಬಿಜೆಪಿಯ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಕಾಣಿಸುತ್ತಾರೆ. ಅವರು ಅಧಿಕೃತವಾಗಿ ಬಿಜೆಪಿ ಸೇರಿದಂತಾಗಿದೆ. ಅವರು ಪ್ರಚಾರ ಪ್ರಿಯರು, ಯಾವಾಗಲೂ ಫೇಸ್ಬುಕ್, ವಾಟ್ಸ್ಆ್ಯಪ್, ಮಾಧ್ಯಮ ಅಂತೆಲ್ಲ ಇರುತ್ತಾರೆ. ಅವರಿಗೆ ಸಮಾಜದ ಬಗ್ಗೆ ಕಳಕಳಿಯಿಲ್ಲ ಎಂದು ದೂರಿದರು.
ಇತ್ತೀಚಿಗೆ ಸ್ವಾಮೀಜಿಗಳು ಮಠಕ್ಕೆ ಬರುವುದು ಅಪರೂಪವಾಗಿದೆ. ಹೀಗಾಗಿ ಅಲ್ಲಿ ಅನೈತಿಕ ಚಟುವಟಿಕೆಗಳು ಹೆಚ್ಚಾಗಿವೆ. ಮಠದ ರಕ್ಷಣೆಗಾಗಿ ಇತ್ತೀಚಿಗೆ ಗೇಟ್, ಸಿಸಿಟಿವಿ ಅಳವಡಿಸಲಾಗಿದೆ. ಸ್ವಾಮೀಜಿ ಸ್ವತಃ ಬಂದು ಬೀಗ ಕೇಳಿದರೇ ಅಲ್ಲಿದ್ದವರೇ ಕೊಡುತ್ತಿದ್ದರು. ಆದರೆ ಅವರ ಸೂಚನೆ ಮೇರೆಗೆ ಏಳು ಜನರು ಬಂದು ಏಕಾಏಕಿ ಬೀಗ ಮುರಿದಿದ್ದಾರೆ.
ಅಷ್ಟೇ ಅಲ್ಲದೇ ಮರುದಿನ ಶ್ರೀಗಳು ಬಸವ ಮಂಟಪಕ್ಕೆ ಬಂದು ಸುಖಾಸುಮ್ಮನೆ ಮಠಕ್ಕೆ ಬಾರದಂತೆ ನನಗೆ ತಡೆದಿದ್ದಾರೆ ಎಂದು ಆಪಾದನೆ ಮಾಡಿದ್ದಾರೆ. ಶ್ರೀಗಳನ್ನು ತಡೆಯುವ ಯಾವುದೇ ಪ್ರಶ್ನೆ ಇಲ್ಲ ಎಂದು ತಿಳಿಸಿದರು.
ಸ್ವಾಮೀಜಿಗಳು ಸಮಾಜದ ಅಗ್ರಗಣ್ಯ ನಾಯಕರೆಂದು ಹೇಳುವವರು ಸಮಾಜಕ್ಕೆ 2ಎ ಅಥವಾ 2ಡಿ ಮೀಸಲಾತಿ ಬೇಕಾ ಎಂಬ ಬಗ್ಗೆ ಸ್ಪಷ್ಟಪಡಿಸಲಿ, ಒಂದು ವೇಳೆ 2ಡಿ ಮೀಸಲಾತಿ ಬೇಕಾದರೇ ಸರ್ಕಾರದಿಂದ ನಮ್ಮ ಮಕ್ಕಳಿಗೆ 2ಡಿ ಪ್ರಮಾಣಪತ್ರ ಕೊಡಿಸಲಿ ಎಂದು ಸವಾಲು ಹಾಕಿದರು.
