Trending

ಶಿವಮೊಗ್ಗದ ನೀರಾವರಿ ಯೋಜನೆಗಳಿಗೆ ₹308 ಕೋಟಿ ಮಂಜೂರು : ಸಚಿವ ಮಧು ಬಂಗಾರಪ್ಪ

Spread the love

ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ತಾಲೂಕಿನ ಕೆರೆ ತುಂಬಿಸುವ ಯೋಜನೆ, ಭದ್ರಾ ನದಿಗೆ ತಡೆಗೋಡೆ ಹಾಗೂ ರಸ್ತೆ ಕಾಮಗಾರಿ ಹಾಗೂ ಸೊರಬ ತಾಲೂಕಿನ ದಂಡಾವತಿ ಡ್ಯಾಂ ಮಾರ್ಪಡಿತ ಯೋಜನೆಯಡಿ ದಂಡಾವತಿ ನದಿಗೆ ಬ್ಯಾರೇಜ್, ಬ್ರಿಡ್ಜ್ ನಿರ್ಮಾಣ ಸೇರಿ ಒಟ್ಟು 308 ಕೋಟಿ ರೂ ಬಿಡುಗಡೆ ಮಾಡಲಾಗಿದೆ ಎಂದು ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಎಸ್.ಮಧು ಬಂಗಾರಪ್ಪ ತಿಳಿಸಿದರು.

ನಗರದ ತಮ್ಮ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸೊರಬ ತಾಲೂಕಿನ ದಂಡಾವತಿ ಡ್ಯಾಂ ಮಾರ್ಪಡಿತ ಯೋಜನೆ ಕಾಮಗಾರಿಗಳಿಗೆ ಅನುಮೋದನೆ ದೊರೆತಿದೆ. ಯಾವುದೇ ರೈತರ ಜಮೀನು ಹಾಗೂ ಮನೆಗಳನ್ನು ಮುಳುಗಡೆಗೊಳಿಸದೆ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ ಎಂದರು.

ಸೊರಬ ತಾಲೂಕಿನ ಯಡಗೊಪ್ಪ ಗ್ರಾಮದ ಹತ್ತಿರ ದಂಡಾವತಿ ನದಿಗೆ ರೂ. 38.50 ಕೋಟಿ ವೆಚ್ಚದಲ್ಲಿ ಬ್ಯಾರೇಜ್ ನಿರ್ಮಿಸಿ 15 ಕೆರೆಗಳನ್ನು ತುಂಬಿಸುವ ಯೋಜನೆ, ದಂಡಾವತಿ ಮತ್ತು ವರದಾ ನದಿಗಳಿಗೆ ಅಡ್ಡಲಾಗಿ ರೂ. 54.70 ಕೋಟಿ ವೆಚ್ಚದಲ್ಲಿ ಬ್ಯಾರೇಜ್ /ಬ್ರಿಡ್ಜ್ ಕಂ ಬ್ಯಾರೇಜ್‌ಗಳನ್ನು ನಿರ್ಮಿಸುವ ಯೋಜನೆ, ಗುಡವಿ ಗ್ರಾಮದ ಹತ್ತಿರ ವರದಾ ನದಿಗೆ ಅಡ್ಡಲಾಗಿ ರೂ.75.60 ಕೋಟಿ ವೆಚ್ಚದಲ್ಲಿ ಬ್ಯಾರೇಜ್ ನಿರ್ಮಿಸಿ 0.1017 ಟಿಎಂಸಿ ನೀರನ್ನೆತ್ತಿ 32 ಕೆರೆಗಳನ್ನು ತುಂಬಿಸುವ ಯೋಜನೆಗೆ ಅನುಮೋದನೆ ದೊರೆತಿದೆ ಎಂದು ತಿಳಿಸಿದರು.

ಭದ್ರಾವತಿ ತಾಲೂಕಿನ ಗೋಣಿಬೀಡು ಗ್ರಾಮದ ಹತ್ತಿರ ರೂ. 54 ಕೋಟಿ ಅಂದಾಜು ವೆಚ್ಚದಲ್ಲಿ ಭದ್ರಾನದಿಯಿಂದ 0.19 ಟಿಎಂಸಿ ನೀರನ್ನು ಕಂಬದಾಳ್ ಹೊಸೂರು ಸಿಂಗನಮನೆ, ಗ್ಯಾರೇಜ್ ಕ್ಯಾಂಪ್, ಶಂಕರಘಟ್ಟ, ಹುಣಸೆಕಟ್ಟೆ, ಗೋಣಿಬೀಡು, ತಮ್ಮಡಿಹಳ್ಳಿ, ರಾಮಿನಕೊಪ್ಪ ಮತ್ತು ಸುತ್ತಮುತ್ತಲಿನ ಗ್ರಾಮಗಳ 2 ಕೆರೆಗಳಿಗೆ ನೀರು ತುಂಬಿಸುವ ಯೋಜನೆ,

ಭದ್ರಾವತಿ ಪಟ್ಟಣದ ಭದ್ರಾ ನದಿ ಎಡ ಮತ್ತು ಬಲದಂಡೆಯ ಪ್ರವಾಹಪೀಡಿತ ಪ್ರದೇಶಗಳನ್ನು ರಕ್ಷಿಸಲು ರೂ. 50 ಕೋಟಿ ವೆಚ್ಚದಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿ ಹಾಗೂ ರೂ.35 ಕೋಟಿ ವೆಚ್ಚದಲ್ಲಿ ಭದ್ರಾ ನದಿಗೆ ಅಡ್ಡಲಾಗಿ ರಸ್ತೆ ಸೇತುವೆ ನಿರ್ಮಾಣ ಮತ್ತು ಡೊಣಬಘಟ್ಟ, ಕಾಗೆಕೊಡುಮಗ್ಗೆ, ಹೊಳೆಹೊನ್ನೂರು ಗ್ರಾಮದ ಭದ್ರಾವತಿ ಮುಖ್ಯ ರಸ್ತೆ ನಡುವೆ ಸಂಪರ್ಕ ರಸ್ತೆ ಕಾಮಗಾರಿಗೆ ಅನುಮೋದನೆ ದೊರೆತಿದ್ದು, ಒಂದೂವರೆ ವರ್ಷದೊಳಗೆ ಈ ಕಾಮಗಾರಿಗಳು ಪೂರ್ಣಗೊಳ್ಳಲಿವೆ.

ಸೊರಬ ತಾಲೂಕಿನಲ್ಲಿ ರೂ. 561 ಕೋಟಿ ಮೊತ್ತದಲ್ಲಿ ಕುಡಿಯುವ ನೀರು ಯೋಜನೆಗಳಿಗೆ ಅಂದಾಜು ಪಟ್ಟಿ ಸಿದ್ದಪಡಿಸಿದ್ದು, ಮುಂದಿನ ದಿನಗಳಲ್ಲಿ ಅನುಮೋದನೆ ಪಡೆಯಲಾಗುವುದು. ಚಂದ್ರಗುತ್ತಿ ಪ್ರಾಧಿಕಾರ ರಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ದೇವಸ್ಥಾನದ ಅಭಿವೃದ್ದಿಗಾಗಿ 20 ಎಕರೆ ಜಮೀನು ಹಸ್ತಾಂತರಗೊಂಡಿರುತ್ತದೆ. ಮೂಲ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಿವರ ನೀಡಿದರು.

ಸಾರ್ವಜನಿಕರಿಂದ ಅಹವಾಲು ಸ್ವೀಕಾರ: ಮಾಧ್ಯಮಗೋಷ್ಟಿಯ ನಂತರ ಸಾರ್ವಜನಿಕರಿಂದ ಸುಮಾರು 100 ಕ್ಕೂ ಹೆಚ್ಚು ಕುಂದು ಕೊರತೆಗಳ ಅಹವಾಲುಗಳನ್ನು ಸ್ವೀಕರಿಸಿದರು.

ರಾಜ್ಯ ಭೋವಿ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಎಸ್.ರವಿಕುಮಾರ್, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಭೂಪಾಲ್, ಮಾಜಿ ವಿಧಾನ ಪರಿಷತ್ ಶಾಸಕರಾದ ಆಯನೂರು ಮಂಜುನಾಥ್, ಆರ್.ಪ್ರಸನ್ನಕುಮಾರ್ ಇತರರು ಮಾಧ್ಯಮಗೋಷ್ಟಿಯಲ್ಲಿ ಇದ್ದರು.

[pj-news-ticker]