Breaking
Sat. Apr 20th, 2024

ನಟ, ರಾಜಕಾರಣಿ ಕೆ. ಶಿವರಾಮ್ ನಿಧನ; ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಹೀರೋ

By Mooka Nayaka News Feb 29, 2024
Spread the love

ಖ್ಯಾತ ನಟ, ಮಾಜಿ ಐಎಎಸ್ ಅಧಿಕಾರಿ, ರಾಜಕಾರಣಿ ಕೆ. ಶಿವರಾಮ್ ಅವರು ನಿಧನ ಹೊಂದಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಚಿತ್ರರಂಗದ ಗಣ್ಯರು ಹಾಗು ರಾಜಕಾರಣಿಗಳು ಕೋರುತ್ತಿದ್ದಾರೆ.

ನಿಧನ ಹೊಂದುವುದಕ್ಕೂ ಮೊದಲು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸೇರಿದಂತೆ ಅನೇಕ ಗಣ್ಯರು ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದ್ದರು. ವೈದ್ಯರು ಎಷ್ಟೇ ಪ್ರಯತ್ನಿಸದರೂ ಶಿವರಾಮ್ ಅವರನ್ನು ಬದುಕಿಸಲು ಸಾಧ್ಯವಾಗಿಲ್ಲ.

ಶಿವರಾಮ್ ಅವರಿಗೆ 15 ದಿನಗಳ ಹಿಂದೆ ಅಧಿಕ ರಕ್ತದೊತ್ತಡದಿಂದ ಸಮಸ್ಯೆ ಆಗಿತ್ತು. ಇತ್ತೀಚೆಗೆ ಹೃದಯಾಘಾತ ಆಯಿತು. ಹೀಗಾಗಿ, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಯಿತು. ಸಾವಿಗೂ ಮುನ್ನ ಅವರ ಮಿದುಳು ಕೂಡ ಕಾರ್ಯ ನಿರ್ವಹಿಸುವುದನ್ನು ನಿಲ್ಲಿಸಿಬಿಟ್ಟಿತ್ತು. ಅವರನ್ನು ಐಸಿಯುನಲ್ಲಿ ಇರಿಸಿ ಚಿಕಿತ್ಸೆ ನೀಡಲಾಯಿತು. ಈಗ ಅವರು ಮೃತಪಟ್ಟಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

ಶಿವರಾಮ್ ಅವರು ಜನಿಸಿದ್ದು, 1953ರ ಏಪ್ರಿಲ್ 6ರಂದು. ರಾಮನಗರ ಅವರ ಹುಟ್ಟೂರು. ತಮ್ಮ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು, ಪ್ರೌಢ ಶಿಕ್ಷಣ ಪಡೆಯಲು ಬೆಂಗಳೂರಿಗೆ ಬಂದರು. 1985ರಲ್ಲಿ ಅವರು ಕೆಎಎಸ್ ಪಾಸ್ ಮಾಡಿ, ಡಿಎಸ್ಪಿ ಆದರು. ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ಪಡೆಯುವಾಗಲೇ ಯುಪಿಎಸ್ಸಿ ಪಾಸ್ ಮಾಡಿದರು. ಈ ಮೂಲಕ ಐಎಎಸ್ ಅಧಿಕಾರಿ ಆದರು. ಕನ್ನಡ ಭಾಷೆಯಲ್ಲಿ ಐಎಎಸ್ ಪಾಸ್ ಮಾಡಿದ ಮೊದಲ ವ್ಯಕ್ತಿ ಎನ್ನುವ ಹೆಮ್ಮೆ ಶಿವರಾಮ್ಗೆ ಇದೆ. 1986ರಿಂದ 2013ರವರೆಗೆ ಅವರು ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.

ಶಿವರಾಮ್ ಅವರಿಗೆ ಸಿನಿಮಾಸಕ್ತಿಯೂ ಬೆಳೆದಿತ್ತು. 1993ರ ಸೂಪರ್ ಹಿಟ್ ಸಿನಿಮಾ ‘ಬಾ ನಲ್ಲೆ ಮಧುಚಂದ್ರಕೆ’ ಚಿತ್ರದಲ್ಲಿ ನಟಿಸಿ ಗೆಲುವು ಕಂಡರು. ನಂತರ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 2017ರಲ್ಲಿ ರಿಲೀಸ್ ಆದ ‘ಟೈಗರ್’ ಅವರ ನಟನೆಯ ಕೊನೆಯ ಸಿನಿಮಾ.

Related Post