Trending

ತಮ್ಮನ ಅಂತ್ಯಸಂಸ್ಕಾರಕ್ಕೆ ಬಂದಿದ್ದ ಅಕ್ಕನೂ ಅಪಘಾತದಲ್ಲಿ ಸಾವು

Spread the love

ಮಂಗಳೂರು: ತಮ್ಮನ ಅಂತ್ಯ ಸಂಸ್ಕಾರಕ್ಕೆಂದು ಚೆನ್ನೈನಿಂದ ಬಂದಿದ್ದ ಅಕ್ಕ ನಗರದ ಹೊರವಲಯದ ಪಾವಂಜೆ ಬಳಿ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಫಲಿಸದೆ, ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ.

ನಗರದ ಬಂಗ್ರಕೂಳೂರು ನಿವಾಸಿ ಶ್ರುತಿ (27) ಮೃತಪಟ್ಟವರು. ಕಂಪ್ಯೂಟರ್ ಇಂಜಿನಿಯರಿಂಗ್ ಮುಗಿಸಿರುವ ಶ್ರುತಿ ಚೆನ್ನೈನಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದರು. ಮೆಕ್ಯಾನಿಕ್ ಆಗಿದ್ದ ತನ್ನ ಸಹೋದರ ಸುಜಿತ್ ಜೂನ್ 10ರಂದು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಅವರು ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಲು ಕೆಲಸಕ್ಕೆ ರಜೆ ಹಾಕಿ ಮನೆಗೆ ಬಂದಿದ್ದರು.

ಈ ನಡುವೆ ಬ್ಯಾಂಕ್ ಕೆಲಸಕ್ಕೆಂದು ತಂದೆಯೊಂದಿಗೆ ಸ್ಕೂಟರ್​ನಲ್ಲಿ ಕಿನ್ನಿಗೋಳಿ ಕಡೆಗೆ ಹೋಗಿ ಮತ್ತೆ ಮನೆಯತ್ತ ಹಿಂದೆ ಬರುತ್ತಿದ್ದರು. ಮಳೆ ಬಂದ ಹಿನ್ನೆಲೆಯಲ್ಲಿ ಪಾವಂಜೆ ಬಳಿ‌ ಸ್ಕೂಟರ್ ನಿಲ್ಲಿಸಿ, ರೈನ್ ಕೋಟ್ ಹಾಕುತ್ತಿದ್ದ ವೇಳೆ ಉಡುಪಿಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಕಾರು ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಸ್ಕೂಟರ್​ ಹಾಗೂ ಅಲ್ಲೇ ನಿಂತಿದ್ದ ಬೈಕ್​ಗೆ ಡಿಕ್ಕಿ ಹೊಡೆದ ಕಾರು, ಶ್ರುತಿಯವರ ಸಹಿತ ಎಳೆದೊಯ್ದು ಹೆದ್ದಾರಿ ಬದಿಯಿದ್ದ ಸಿಮೆಂಟ್ ಸ್ಲ್ಯಾಬ್‌ಗೆ ಅಪ್ಪಳಿಸಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಪರಿಣಾಮ ಗಂಭೀರ ಗಾಯಗೊಂಡ ಶ್ರುತಿ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅವರ ಜೊತೆಗಿದ್ದ ತಂದೆ ಗೋಪಾಲ ಆಚಾರ್ಯ (57) ಕೂಡ ಅಪಘಾತದಲ್ಲಿ ಗಾಯಗೊಂಡಿದ್ದು, ಅವರ ಕಾಲಿನ ಮೂಳೆ ಮುರಿತಕ್ಕೊಳಗಾಗಿದೆ. ಘಟನೆಯಲ್ಲಿ ಮತ್ತೋರ್ವ ಮಹಿಳೆಯೂ ಗಾಯಗೊಂಡಿದ್ದಾರೆ.

ಗೋಪಾಲ ಆಚಾರ್ಯರಿಗೆ ಇಬ್ಬರೇ ಮಕ್ಕಳಾಗಿದ್ದು, ಪುತ್ರ 15 ದಿನಗಳ ಹಿಂದಷ್ಟೇ ಮೃತಪಟ್ಟಿದ್ದ. ಆ ನೋವು ಮಾಸುವ ಮುನ್ನವೇ ಪುತ್ರಿಯೂ ಅಪಘಾತದಿಂದ ಸಾವನ್ನಪ್ಪಿದ್ದಾರೆ. ಅಪಘಾತದ ಬಗ್ಗೆ ಮುಲ್ಕಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

[pj-news-ticker]