Trending

ಯಡಿಯೂರಪ್ಪ ಅಸ್ತಿತ್ವ ಉಳಿದಿಲ್ಲ ಎಂಬುವುದನ್ನು ಅಮಿತ್ ಶಾ ತಿಳಿದುಕೊಳ್ಳಲಿ : ಯತ್ನಾಳ್

Spread the love

ವಿಜಯಪುರ: ರಾಜ್ಯದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರ ಅಸ್ತಿತ್ವ ಉಳಿದಿಲ್ಲ ಎಂಬುವುದನ್ನು ಗೃಹ ಸಚಿವ ಅಮಿತ್ ಶಾ ತಿಳಿದುಕೊಳ್ಳಬೇಕು ಎಂದು ಬಿಜೆಪಿಯ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿ, ”ಕರ್ನಾಟಕ ಬಿಜೆಪಿಯಲ್ಲಿ ಅಸಮಾಧಾನ ತುಂಬಿತುಳುಕುತ್ತಿದೆ.

ರಾಜ್ಯ ಘಟಕವು ಐಸಿಯುನಲ್ಲಿದೆ. ಪಕ್ಷದಲ್ಲಿ ಸಂಘಟನೆ ಇಲ್ಲ. ಯಾವುದೇ ಹೋರಾಟ ಮಾಡಿದರೂ 10-15 ಜನ ಸಹ ಸೇರುತ್ತಿಲ್ಲ. ಯಾಕೆಂದರೆ, ರಾಜ್ಯದ ನಾಯಕತ್ವವೇ ಸರಿಯಿಲ್ಲ ಎಂದು ವಾಗ್ದಾಳಿ ನಡೆಸಿದರು.

”ಕೇಂದ್ರ ಸಚಿವ ಕುಮಾರಸ್ವಾಮಿ ಜತೆಗೂ ರಾಜ್ಯ ಬಿಜೆಪಿ ಹೊಂದಾಣಿಕೆ ಇಲ್ಲ. ಜೆಡಿಎಸ್ ಮಿತ್ರಪಕ್ಷವಾಗಿದ್ದರೂ, ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ ಗೃಹ ಸಚಿವ ಅಮಿತ್ ಶಾ ಮಾತ್ರ ಎಲ್ಲವನ್ನೂ ಅರಿತುಕೊಳ್ಳಬೇಕು. ಯಡಿಯೂರಪ್ಪ ಕುಟುಂಬದ ಬಗ್ಗೆ ಹಾಗೂ ಅವರ ಅಸ್ತಿತ್ವ ಉಳಿದಿಲ್ಲ ಎಂಬುವುದನ್ನು ತಿಳಿದುಕೊಳ್ಳಬೇಕು. ಇನ್ನೂ ಕೂಡ ಯಡಿಯೂರಪ್ಪಜಿ… ಯಡಿಯೂರಪ್ಪಾಜಿ ಎಂದರೆ ಕರ್ನಾಟಕದಲ್ಲಿ ಬಿಜೆಪಿಗೆ ಮುಂದೆ ಬಹಳ ಹೀನಾಯವಾದ ಸೋಲಾಗುತ್ತದೆ. ಬಿಜೆಪಿಯ ಅಸಮಾಧಾನಿತ ನಾಯಕರು ಮಾತ್ರವಲ್ಲದೇ ತಟಸ್ಥ ಬಣದಿಂದಲೂ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬದಲಾವಣೆ ಮಾಡಬೇಕು ಹಾಗೂ ಯಡಿಯೂರಪ್ಪ ಭ್ರಷ್ಟ ಕುಟುಂಬದಿಂದ ಬಿಜೆಪಿ ಮುಕ್ತ ಮಾಡಬೇಕು ಎಂಬುವುದೇ ಬೇಡಿಕೆ” ಎಂದರು.

”ಪಕ್ಷದ ಕಾರ್ಯಕರ್ತರು ಹಿಂದುತ್ವದ ಸಲುವಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಕಾರ್ಯಕರ್ತರ ಮೇಲೆ ನಿತ್ಯ ಕೇಸ್‌ಗಳನ್ನು ಹಾಕುತ್ತಿದೆ. ಮತ್ತೊಂದೆಡೆ, ಯಡಿಯೂರಪ್ಪ ಮೊಮ್ಮಗನ ಮದುವೆಯಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ, ಜಮೀರ್ ಅಹ್ಮದ್ ಜತೆಗೆ ಎಷ್ಟೊಂದು ಆತ್ಮೀಯತೆಯಿಂದ ಇದ್ದರು. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಅವರೊಂದಿಗೆ ಸರಸ ಸಲ್ಲಾಪವಾಡುತ್ತಾರೆ. ಇದರಿಂದ ಕಾರ್ಯಕರ್ತರಿಗೆ ಯಾವ ಸಂದೇಶ ಕೊಡುತ್ತಿದ್ದಾರೆ?, ಅಷ್ಟು ಆತ್ಮೀಯತೆ ಇದ್ದರೆ, ಬಿಜೆಪಿಯಿಂದ ಹೊರಹೋಗಿ ಡಿ.ಕೆ.ಶಿವಕುಮಾರ ಪಕ್ಷವನ್ನು ಸೇರಿಕೊಳ್ಳಲಿ” ಎಂದು ಯಡಿಯೂರಪ್ಪ ಕುಟುಂಬದ ಬಗ್ಗೆ ಮತ್ತೆ ಕಿಡಿ ಕಾರಿದರು.

[pj-news-ticker]