ಹೊಸದಿಲ್ಲಿ: ಯೋಗ ಗುರು ಬಾಬಾ ರಾಮ್‌ದೇವ್ ಸಹ ಮಾಲೀಕತ್ವದ ಪತಂಜಲಿ ಆಯುರ್ವೇದ ಸಂಸ್ಥೆಯ ‘ದಾರಿ ತಪ್ಪಿಸುವ ಮತ್ತು ಸುಳ್ಳು’ ಜಾಹೀರಾತುಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್ ಮಂಗಳವಾರ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಸರ್ಕಾರ ತನ್ನ ಕಣ್ಣುಗಳನ್ನು ಮುಚ್ಚಿ ಕುಳಿತಿದೆ ಎಂದು ನ್ಯಾಯಾಲಯ ಕಿಡಿಕಾರಿದೆ.
ತನ್ನ ಉತ್ಪನ್ನಗಳ ಕುರಿತು ತಪ್ಪು ದಾರಿಗೆಳೆಯುವ ಜಾಹೀರಾತುಗಳ ವಿರುದ್ಧದ ತನ್ನ ಆದೇಶವನ್ನು ಉಲ್ಲಂಘಿಸಿದ ಕಾರಣಕ್ಕೆ ಪತಂಜಲಿ ಆಯುರ್ವೇದ ಮತ್ತು ಅದರ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ ವಿರುದ್ಧ ಸುಪ್ರೀಂಕೋರ್ಟ್ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿದೆ.
ಮುಂದಿನ ಆದೇಶದವರೆಗೂ ಎಲ್ಲಾ ವಿದ್ಯುನ್ಮಾನ ಹಾಗೂ ಮುದ್ರಣದಲ್ಲಿನ ತನ್ನ ಔಷಧೀಯ ಉತ್ಪನ್ನಗಳ ಜಾಹೀರಾತು ಪ್ರದರ್ಶಿಸದಂತೆ ಪತಂಜಲಿಗೆ ನ್ಯಾಯಾಲಯ ನಿರ್ಬಂಧ ವಿಧಿಸಿದೆ.
ಅಂತಹ ಜಾಹೀರಾತಿನಿಂದ ಇಡೀ ದೇಶವನ್ನು ದಾರಿ ತಪ್ಪಿಸಲಾಗುತ್ತಿದೆ. ಇದು ಬಹಳ ದುರದೃಷ್ಟಕರ. ಸರ್ಕಾರವು ಕೂಡಲೇ ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.
ಐಎಂಎ ಪರ ಹಾಜರಾದ ಹಿರಿಯ ವಕೀಲ ಪಿಎಸ್ ಪಟ್ವಾಲಿಯಾ, ಯೋಗದ ಸಹಾಯದಿಂದ ಮಧುಮೇಹ ಮತ್ತು ಆಸ್ತಮಾವನ್ನು ಸಂಪೂರ್ಣವಾಗಿ ಗುಣಪಡಿಸುವುದಾಗಿ ಪತಂಜಲಿ ಹೇಳಿಕೊಂಡಿದೆ ಎಂದು ಆರೋಪಿಸಿದರು.