ಭಾವನಗರ, ಗುಜರಾತ್: ಅಹಮದಾಬಾದ್ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಸಾವನ್ನಪ್ಪಿದ ಎಂಬಿಬಿಎಸ್ ವಿದ್ಯಾರ್ಥಿ ರಾಕೇಶ್ ದಿಹೋರಾ (25) ಹಾಗೂ ಗರ್ಭಿಣಿ ವೈದ್ಯೆ ಕಾಜಲ್ಬೆನ್ ಸೋಲಂಕಿ (28) ಅವರ ಅಂತ್ಯಕ್ರಿಯೆ ಶುಕ್ರವಾರ ಸಂಜೆ ಗುಜರಾತ್ನ ಭಾವನಗರ ಜಿಲ್ಲೆಯ ಅವರ ಗ್ರಾಮದಲ್ಲಿ ನಡೆಯಿತು.
ಜೂನ್ 12 ರಂದು ಅಹಮದಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಮೇಘನಿನಗರದಲ್ಲಿರುವ ಬಿಜೆ ವೈದ್ಯಕೀಯ ಕಾಲೇಜು ಹಾಸ್ಟೆಲ್ ಮೇಲೆ ಏರ್ ಇಂಡಿಯಾ ವಿಮಾನ ಅಪ್ಪಳಿಸಿದ ಪರಿಣಾಮ, ವಿಮಾನದಲ್ಲಿದ್ದ 241 ಜನರು ಹಾಗೂ ಹಾಸ್ಟೆಲ್ನಲ್ಲಿದ್ದ ವಿದ್ಯಾರ್ಥಿಗಳು ಸೇರಿದಂತೆ ಸುತ್ತಮುತ್ತಲಿದ್ದ ಒಟ್ಟು 33 ಜನರು ಸಾವನ್ನಪ್ಪಿದ್ದಾರೆ. ವಿಮಾನದಲ್ಲಿದ್ದ ರಮೇಶ್ ವಿಶ್ವಾಸ್ ಕುಮಾರ್ ಎಂಬ ವ್ಯಕ್ತಿ ಮಾತ್ರ ಬದುಕುಳಿದಿದ್ದಾರೆ.
25 ವರ್ಷದ ರಾಕೇಶ್ ದಿಹೋರಾ ನಿಧನ: ಭಾವನಗರ ಜಿಲ್ಲೆಯ ತಲಜಾ ತಾಲೂಕಿನ ಸೋಸಿಯಾ ಗ್ರಾಮದ ನಿವಾಸಿ ಮತ್ತು ಅಹಮದಾಬಾದ್ನ ಬಿಜೆ ವೈದ್ಯಕೀಯ ಕಾಲೇಜಿನಲ್ಲಿ ಎರಡನೇ ವರ್ಷದಲ್ಲಿ ಓದುತ್ತಿದ್ದ ರಾಕೇಶ್ ದಿಹೋರಾ ವಿಮಾನ ಅಪಘಾತದಲ್ಲಿ ನಿಧನರಾದರು. ದಿಹೋರಾ ಹಾಸ್ಟೆಲ್ನಲ್ಲಿ ಊಟ ಮಾಡುತ್ತಿದ್ದಾಗ ಕಟ್ಟಡದ ಗೋಡೆಗಳು ಮತ್ತು ಛಾವಣಿ ಕುಸಿದು ಸಾವನ್ನಪ್ಪಿದರು. ಆತನ ಗ್ರಾಮವಾದ ಸೋಸಿಯಾದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಕೃಷಿಯಲ್ಲಿ ತೊಡಗಿಸಿಕೊಂಡಿರುವ ರಾಕೇಶ್ ಅವರ ತಂದೆ ಹಾಗೂ ಇಡೀ ಕುಟುಂಬ ದುಃಖದಲ್ಲಿದೆ. ರಾಕೇಶ್ಗೆ ವಿಪುಲ್ಭಾಯ್ ಎಂಬ ಅಣ್ಣ ಇದ್ದು, ಸೋಸಿಯಾ ಗ್ರಾಮದಾದ್ಯಂತ ಶೋಕದ ವಾತಾವರಣ ತುಂಬಿದೆ.
ತಲಜಾದ ಗರ್ಭಿಣಿ ವೈದ್ಯೆ ಸಾವು: ಕಾಜಲ್ಬೆನ್ ಅವರ ಸಹೋದರ ಭವಿನ್ಭಾಯ್ ಸಾಂತಾ ಕೂಡ ಅದೇ ಹಾಸ್ಟೆಲ್ನಲ್ಲಿ ತಂಗಿದ್ದರು. ವಿಮಾನ ಅಪಘಾತಕ್ಕೆ ಒಂದು ದಿನ ಮೊದಲು, ಕಾಜಲ್ಬೆನ್ ಬಿಜೆ ವೈದ್ಯಕೀಯ ಕಾಲೇಜು ಹಾಸ್ಟೆಲ್ಗೆ ಬಂದಿದ್ದರು. ವಿಮಾನ ಅಪಘಾತಕ್ಕೀಡಾದಾಗ ತಲಜಾದ ಡಿಯೋಲಿ ಗ್ರಾಮದವರಾದ ಕಾಜಲ್ಬೆನ್ ಹಾಸ್ಟೆಲ್ ಕಟ್ಟಡದಲ್ಲಿ ಇದ್ದ ಕಾರಣ ಸಾವನ್ನಪ್ಪಿದವರಲ್ಲಿ ಅವರೂ ಒಬ್ಬರು.
5 ದಿನಗಳ ಹಿಂದೆಯಷ್ಟೇ ಸೀಮಂತವಾಗಿತ್ತು: ಕುಟುಂಬದವರು ಈಟಿವಿ ಭಾರತಕ್ಕೆ ನೀಡಿದ ಮಾಹಿತಿಯ ಪ್ರಕಾರ, ಕೇವಲ ಐದು ದಿನಗಳ ಹಿಂದೆಯಷ್ಟೇ ಅವರ ಗ್ರಾಮದಲ್ಲಿ ಕಾಜಲ್ಬೆನ್ ಅವರ ಸೀಮಂತ ಶಾಸ್ತ್ರ ನಡೆದಿತ್ತು. ಹೋಮಿಯೋಪತಿಯಲ್ಲಿ ಎಂಡಿ ಮಾಡಿದ್ದ ಡಾ. ಕಾಜಲ್ಬೆನ್, ಎರಡು ವರ್ಷಗಳ ಹಿಂದೆ ಡಾ. ಪ್ರದೀಪ್ ಸೋಲಂಕಿ ಅವರನ್ನು ವಿವಾಹವಾಗಿದ್ದರು. ವಿಮಾನ ಅಪಘಾತಕ್ಕೆ ಕೇವಲ ಒಂದು ದಿನ ಮೊದಲು ಅವರು ವೈದ್ಯಕೀಯ ಕಾಲೇಜಿಗೆ ತೆರಳಿದ್ದರು.
ಕೇಂದ್ರ ಸಚಿವೆ ನಿಮುಬೆನ್ ಬಂಭಾನಿಯಾ ಅವರು ದಿಹೋರಾ ಮತ್ತು ಕಾಜಲ್ಬೆನ್ ಅವರ ಕುಟುಂಬಗಳನ್ನು ಭೇಟಿ ಮಾಡಿ ಅವರಿಗೆ ಸಂತಾಪ ಸೂಚಿಸಿದರು. ಅಂತ್ಯಕ್ರಿಯೆ ವೇಳೆ ನಿಮುಬೆನ್ ಬಂಭಾನಿಯಾ ಹಾಗೂ ತಲಾಜಾ ಶಾಸಕ ಗೌತಮ್ಭಾಯ್ ಚುವಾಹನ್ ಮತ್ತು ಜಿಲ್ಲಾ ಬಿಜೆಪಿ ಅಧ್ಯಕ್ಷರು ಸೇರಿದಂತೆ ಅನೇಕ ಸಂಘಟನೆಯ ಮುಖಂಡರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಕುಟುಂಬಕ್ಕೆ ಸಾಂತ್ವನ ಹೇಳಿದರು.
