ಮಂಗಳೂರು: ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮಂಗಳೂರು ಮೂಲದ ಮುಂಬೈ ನಿವಾಸಿ, ಸಹ ಪೈಲಟ್ ಕ್ಲೈವ್ ಕುಂದರ್ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಕ್ಲೈವ್ ಕುಂದರ್ ಅವರು ಪ್ಯಾರಿಸ್ ಏರ್ ಇಂಕ್‌ನಲ್ಲಿ ತರಬೇತಿ ಪಡೆದಿದ್ದರು. 1,100 ಗಂಟೆಗಳ ಹಾರಾಟದ ಅನುಭವ ಹೊಂದಿರುವ ಇವರು, ಇಂದು ಅಪಘಾತಕ್ಕೀಡಾದ ವಿಮಾನದ ಕ್ಯಾಪ್ಟನ್ ಸುಮಿತ್ ಸಭರ್ವಾಲ್ ಅವರ ಜತೆ ಸಹ ಪೈಲಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.
ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ನ ಗ್ಯಾಟ್‌ವಿಕ್ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಏರ್ ಇಂಡಿಯಾ ಬೋಯಿಂಗ್ 787-8 ಡ್ರೀಮ್‌ಲೈನರ್ ಗುರುವಾರ ಮಧ್ಯಾಹ್ನ ಅಹಮದಾಬಾದ್‌ನಲ್ಲಿ ಟೇಕಾಫ್ ಆದ ಕೆಲವೇ ನಿಮಿಷದಲ್ಲಿ ಪತನಗೊಂಡಿದೆ. ಅವಘಡ ನಡೆದಾಗ ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಮತ್ತು ಫಸ್ಟ್ ಆಫೀಸರ್ (ಸಹ ಪೈಲಟ್) ಕ್ಲೈವ್ ಕುಂದರ್ ವಿಮಾನ ಚಾಲನೆ ಮಾಡುತ್ತಿದ್ದರು. ಇಬ್ಬರಿಗೂ ಒಟ್ಟು 9,300 ಗಂಟೆಗಳ ಹಾರಾಟದ ಅನುಭವವಿದೆ ಎಂದು ವರದಿಯಾಗಿದೆ.
ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಲೈನ್ ಟ್ರೈನಿಂಗ್ ಕ್ಯಾಪ್ಟನ್ (LTC) ಆಗಿದ್ದಾರೆ. ಕ್ಯಾಪ್ಟನ್ ಸಭರ್ವಾಲ್ 8,200 ಗಂಟೆಗಳ ವಿಮಾನ ಹಾರಾಟದ ಅನುಭವ ಹೊಂದಿದ್ದರು. ಸಹಾಯಕ ಪೈಲಟ್ ಕ್ಲೈವ್ ಕುಂದರ್ 1,100 ಗಂಟೆಗಳ ಅನುಭವ ಹೊಂದಿದ್ದರು ಎಂದು ನಾಗರಿಕ ವಿಮಾನಯಾನ ನಿಯಂತ್ರಣ ಮಂಡಳಿ ಹೇಳಿದೆ.
ವಿಮಾನವು ಪ್ರತಿ ನಿಮಿಷಕ್ಕೆ 475 ಅಡಿಗಳಷ್ಟು ಕೆಳಗೆ ಬೀಳುತ್ತಿತ್ತು. 625 ಅಡಿ ಎತ್ತರದಿಂದ ವೇಗವಾಗಿ ಕೆಳಗೆ ಬಂದ ಕಾರಣ ಪೈಲಟ್‌ಗಳಿಗೆ ಪ್ರತಿಕ್ರಿಯಿಸಲು ಕೇವಲ ಒಂದು ನಿಮಿಷಕ್ಕಿಂತ ಕಡಿಮೆ ಸಮಯವಿತ್ತು. ATCಯನ್ನು ಸಂಪರ್ಕಿಸಿದರೂ ಯಾವುದೇ ಪ್ರತಿಕ್ರಿಯೆ ಬಂದಲ್ಲ. ನಂತರ ಕೆಲವೇ ಕ್ಷಣಗಳಲ್ಲಿ ವಿಮಾನ ನೆಲಕ್ಕೆ ಅಪ್ಪಳಿಸಿದೆ.
