Trending

ತೀರ್ಥಹಳ್ಳಿಯಲ್ಲಿ ಕಾಂತಾರ ಅಧ್ಯಾಯ -1ರ ಚಿತ್ರೀಕರಣ : ಹಾಸ್ಯ ಕಲಾವಿದ ಹೃದಯಾಘಾತದಿಂದ ನಿಧನ

Spread the love

ಶಿವಮೊಗ್ಗ: ಕಾಂತಾರ ಅಧ್ಯಾಯ 1 ಚಲನಚಿತ್ರದ ಕಲಾವಿದನೋರ್ವ ಹೃದಯಾಘಾತದಿಂದ ಆಗುಂಬೆಯಲ್ಲಿ ಮೃತಪಟ್ಟಿದ್ದಾರೆ. ತೀರ್ಥಹಳ್ಳಿ ತಾಲೂಕಿನ ಸುತ್ತಮುತ್ತ ಕಳೆದ 15 ದಿನಗಳಿಂದ ಕಾಂತಾರ ಅಧ್ಯಾಯ 1ರ ಚಿತ್ರದ ಚಿತ್ರೀಕರಣ ನಡೆಯುತ್ತಿದೆ.

ಈ ಹಿನ್ನಲೆ ಕೇರಳದ ತ್ರಿಶೂರ್​ ಮೂಲದ ಹಾಸ್ಯ ಕಲಾವಿದ ನಿಜು ಕಲಾಭವನ್(55) ಬುಧವಾರ ಶೂಟಿಂಗ್​ಗೆಂದು ಆಗಮಿಸಿದ್ದರು. ನಿಜು ಸೇರಿದಂತೆ ಇತರರಿಗೆ ಆಗುಂಬೆಯ ಮಿಥಿಲ ಹೋಂ ಸ್ಟೇನಲ್ಲಿ ಉಳಿದುಕೊಳ್ಳಲು ಚಿತ್ರತಂಡ ವ್ಯವಸ್ಥೆ ಮಾಡಿಕೊಟ್ಟಿತ್ತು. ನಿನ್ನೆ ರಾತ್ರಿ ಹೋಂಸ್ಟೇನಲ್ಲಿ ನಿಜು ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಆಗ ತಕ್ಷಣವೇ ಅವರನ್ನು ಆಂಬ್ಯುಲೆನ್ಸ್​ನಲ್ಲಿ ತೀರ್ಥಹಳ್ಳಿಯ ಜೆ.ಸಿ. ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ ನಿಜು ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.

ಆಗುಂಬೆ ಪೊಲೀಸ್ ಠಾಣೆಯ ಪಿಎಸ್ಐ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಮೃತ ನಿಜು ಅವರ ಕುಟುಂಬಕ್ಕೆ ಮಾಹಿತಿ ನೀಡಿಲಾಗಿದೆ. ಅವರ ಕುಟುಂಬದವರು ತ್ರಿಶೂರ್​ನಿಂದ ಹೊರಟಿದ್ದು, ತೀರ್ಥಹಳ್ಳಿಗೆ ಬಂದ ನಂತರ ದೂರು ಸ್ವೀಕರಿಸಿ ಮುಂದಿನ ಕ್ರಮವನ್ನು ಆಗುಂಬೆ ಪೊಲೀಸರು ಜರುಗಿಸಲಿದ್ದಾರೆ ಎಂದು ತೀರ್ಥಹಳ್ಳಿ ಡಿವೈಎಸ್ಪಿ ಅರವಿಂದ ಕಲಗುಜ್ಜಿ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ತೀರ್ಥಹಳ್ಳಿಯ ಜೆ.ಸಿ. ಆಸ್ಪತ್ರೆಯ ಶವಗಾರದಲ್ಲಿ ನಿಜು ಶವವನ್ನು ಇಡಲಾಗಿದೆ. ಇನ್ನು, ಇದಕ್ಕೂ ಮೊದಲು ಕಾಂತಾರ-2 ಚಿತ್ರ ತಂಡದ ಇಬ್ಬರು ಕಲಾವಿದರು ಸಾವನ್ನಪ್ಪಿದ್ದರು.

ಕಳೆದ ತಿಂಗಳ ಮೇ 6 ರಂದು ಕಾಂತಾರ ಸಿನಿಮಾದ ಜ್ಯೂನಿಯರ್​ ಆರ್ಟಿಸ್ಟ್​ ಆಗಿದ್ದ ಕೇರಳ ಮೂಲದ ಎಂ.ಎಫ್.ಕಪಿಲ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು. ಈಜಾಡಲು ಇವರು ನದಿಗೆ ಹಾರಿದ್ದರು. ನದಿಯ ಸುಳಿಗೆ ಸಿಲುಕಿ ಕೊಚ್ಚಿ ಹೋಗಿದ್ದರು. ಬಳಿಕ ಸ್ಥಳೀಯರು ಹಾಗೂ ಪೊಲೀಸರು ಅಗ್ನಿಶಾಮಕ ದಳದ ಸಹಾಯದಿಂದ ಮೃತದೇಹ ಪತ್ತೆ ಹಚ್ಚಿದ್ದರು. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇತ್ತೀಚಿಗೆ ಕಾಮಿಡಿ ಕಲಾವಿದ ರಾಕೇಶ್​ ನಿಧನ: ರಿಯಾಲಿಟಿ ಶೋ ಮೂಲಕ ಇಡೀ ರಾಜ್ಯದ ಜನರನ್ನು ತನ್ನ ಹಾಸ್ಯದ ಮೂಲಕ ನಕ್ಕು ನಲಿಸಿದ್ದ ಕಾಮಿಡಿಯನ್​ ರಾಕೇಶ್​ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ರಾಕೇಶ್​ ಸಹ ಕಾಂತಾರ ಚಾಪ್ಟರ್​ 1 ರಲ್ಲಿ ಸಹ ಕಲಾವಿದರಾಗಿ ನಟಿಸಿದ್ದರು.

[pj-news-ticker]