ಶಿವಮೊಗ್ಗ: ಉಗ್ರರರ ವಿರುದ್ಧದ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಯೋಧ ವಿಜಯ್ ಕುಮಾರ್ ಅವರಿಗೆ ನಗರದ ರೈಲ್ವೆ ನಿಲ್ದಾಣದಲ್ಲಿ ಕುಟುಂಬಸ್ಥರು, ಸ್ನೇಹಿತರು ಮತ್ತು ಯುವ ಕಾಂಗ್ರೆಸ್ ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತ ಕೋರಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರಸನ್ನ ಕುಮಾರ್, ಯುವ ಕಾಂಗ್ರೆಸ್ ಹಾಗೂ ಎನ್ಎಸ್ಯುಐ ಪದಾಧಿಕಾರಿಗಳು ಹವಾಲ್ದಾರ್ ವಿಜಯ ಕುಮಾರ್ಗೆ ಸಿಹಿ ತಿನ್ನಿಸಿ, ಹಾರ, ಪೇಟ, ಶಾಲು ಹೊದಿಸಿದರು.
ಶಿವಮೊಗ್ಗದ ಸಿಗೇಹಟ್ಟಿಯ ತುಮಕೂರು ಶ್ಯಾಮರಾವ್ ರಸ್ತೆಯ ನಿವಾಸಿಯಾದ ವಿಜಯ್ ಕುಮಾರ್, ಕಥುವಾ ಸೆಕ್ಟರ್ನಲ್ಲಿ ಭದ್ರತೆ ಹಾಗೂ ಪಾಕಿಸ್ತಾನದ ಡ್ರೋನ್ಗಳ ಮೇಲೆ ಕಣ್ಗಾವಲು ಇಡಲು ನಿಯೋಜನೆಗೊಂಡಿದ್ದರು. ಸೇನೆಯ ಇಎಂಇ (ಎಲೆಕ್ಟ್ರಾನಿಕ್ ಮೆಕ್ಯಾನಿಕಲ್ ಇಂಜಿನಿಯರ್) ಕಾರ್ಪ್ಸ್ನಲ್ಲಿ ವಿಜಯ್ ಕುಮಾರ್ ಕರ್ತವ್ಯ ನಿರ್ವಹಿಸಿದ್ದರು. ವಿಜಯ್ ಕುಮಾರ್ 2002ರ ಸೆಪ್ಟೆಂಬರ್ 12 ರಂದು ಸೇನೆಗೆ ಸೇರಿದ್ದು, 23 ವರ್ಷ ಸೇವೆ ಸಲ್ಲಿಸಿದ್ದಾರೆ. ವಿಜಯ್ ಕುಮಾರ್ ಮುಂದಿನ ವರ್ಷದ ಸೆಪ್ಟೆಂಬರ್ನಲ್ಲಿ ಸೇವೆಯಿಂದ ನಿವೃತ್ತಿಯಾಗಲಿದ್ದಾರೆ. ಇವರಿಗೆ 6ಕ್ಕೂ ಹೆಚ್ಚು ಸರ್ವಿಸ್ ಮೆಡಲ್ಗಳು ಸಿಕ್ಕಿವೆ.
ಹವಾಲ್ದಾರ್ ವಿಜಯ್ ಕುಮಾರ್ ಮಾತನಾಡಿ, ನಾನು ಈ ರೀತಿಯ ಸ್ವಾಗತ ಸಿಗುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ನನ್ನ ಸ್ನೇಹಿತರು, ಕಾಂಗ್ರೆಸ್ನ ಎಲ್ಲಾ ಪದಾಧಿಕಾರಿಗಳಿಗೆ ಧನ್ಯವಾದ. ಇಂತಹ ಸ್ವಾಗತದಿಂದ ನಾವು ಪಟ್ಟ ಕಷ್ಟ ಎಲ್ಲ ಮರೆತುಹೋಗುತ್ತೇವೆ. ಎಲ್ಲಾ ಯೋಧರಿಗೂ ಇದೇ ರೀತಿ ಸ್ವಾಗತ ಸಿಗಬೇಕು ಎಂದರು.
ನಾನು ಕಾಶ್ಮೀರದ ಕಥುವಾ ಸೆಕ್ಟರ್ನಲ್ಲಿ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಕ್ಕೆ ಹೆಮ್ಮೆ ಇದೆ. ಪಾಕ್ ನಿಂದ 25 ಕಿಲೋಮೀಟರ್ ದೂರದಲ್ಲಿ ನನಗೆ ಡ್ಯೂಟಿ ಇತ್ತು. ಪಾಕ್ನಿಂದ ರಾತ್ರಿ ವೇಳೆ ಬರುತ್ತಿದ್ದ ಡ್ರೋನ್ಗಳನ್ನು ನಾವು ಹೊಡೆದುರುಳಿಸುತ್ತಿದ್ದೆವು, ಸೇನೆಯಲ್ಲಿ ಸೇವೆ ಸಲ್ಲಿಸಲು ಹಲವರಿಗೆ ಅವಕಾಶ ಸಿಗುತ್ತದೆ. ಆದರೆ ಯುದ್ಧದಲ್ಲಿ ಭಾಗಿಯಾಗುವ ಅವಕಾಶ ಕೆಲವರಿಗಷ್ಟೇ ಸಿಗುತ್ತದೆ. ಆಪರೇಷನ್ ಸಿಂಧೂರದಲ್ಲಿ ಭಾಗವಹಿಸಿದ್ದಕ್ಕೆ ನಮಗೆ ಹೆಮ್ಮೆ ಇದೆ ಎಂದು ಹೇಳಿದರು.
ವಿಜಯ್ ಕುಮಾರ್ ಪತ್ನಿ ರೇಖಾ ಮಾತನಾಡಿ, ನಾವು ಅಲ್ಲಿನ ಕ್ವಾರ್ಟರ್ಸ್ನಲ್ಲಿದ್ದಾಗ ಬಾಂಬ್ ಹಾಕಿದ ಶಬ್ಧ ಕೇಳಿಬರುತ್ತಿತ್ತು. ಇದರಿಂದ ನಮ್ಮನ್ನು ಬೇರೆಡೆಗೆ ಸ್ಥಳಾಂತರಿಸಿದರು. ಪಾಕ್ ಡ್ರೋನ್ ದಾಳಿ ವೇಳೆ ನಾವು ಎಲ್ಲಾ ಲೈಟ್ ಆಫ್ ಮಾಡಿ ಮನೆ ಒಳಗೆ ಇರಬೇಕಿತ್ತು. ನಮ್ಮನ್ನು ಅಲ್ಲಿಂದ ರೈಲಿನಲ್ಲಿ ಕಳುಹಿಸಿ ಕೊಟ್ಟರು. ರೈಲಿನಲ್ಲಿ ನಮಗೆ ಯಾವುದೇ ಟಿಕೆಟ್ ಇಲ್ಲದೆ ಕಳುಹಿಸಿಕೊಟ್ಟರು. ಪತಿ ದೇಶಕ್ಕಾಗಿ ಸೇವೆ ಸಲ್ಲಿಸುತ್ತಿದ್ದಾರೆಂಬ ಹೆಮ್ಮೆ ಇದ್ದರೂ ಸಹ ಭಯ ಇದ್ದೇ ಇರುತ್ತದೆ. ಈಗ ಅವರು ಸುರಕ್ಷಿತವಾಗಿ ವಾಪಸ್ ಬಂದಿದ್ದಕ್ಕೆ ಸಂತಸವಾಯಿತು ಎಂದರು.
ಸ್ಥಳೀಯರಾದ ಶಿವಕುಮಾರ್ ಮಾತನಾಡಿ, ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಶಿವಮೊಗ್ಗದ ವಿಜಯ್ ಕುಮಾರ್ ಭಾಗಿಯಾಗಿದ್ದು, ನಮಗೆ ಸಂತೋಷ ತಂದಿದೆ. ವಿಜಯ್ ಕುಮಾರ್ ಅವರಿಗೆ ನಾವೆಲ್ಲಾ ಅದ್ಧೂರಿಯಾಗಿ ಸ್ವಾಗತ ಕೋರಿದ್ದೇವೆ ಎಂದು ಹೇಳಿದರು.
