Trending

VISL ಕಾರ್ಖಾನೆಗೆ ಕೇಂದ್ರದ ಅಧಿಕಾರಿಗಳ ನಿಯೋಗ ಭೇಟಿ

Spread the love

ಭದ್ರಾವತಿ : ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗೆ ಕೇಂದ್ರ ಉಕ್ಕು ಸಚಿವಾಲಯದ ಕಾರ್ಯದರ್ಶಿ ಸಂದೀಪ್​ ಫೌಂಡ್ರಿಕ್​ ನೇತೃತ್ವದ ನಾಲ್ವರು ಸದಸ್ಯರ ನಿಯೋಗವು ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದೆ. ಕಾರ್ಖಾನೆಯ ಪುನಶ್ಚೇತನಕ್ಕೆ ಬೇಕಾದ ಕ್ರಮಗಳ ಬಗ್ಗೆ ನಿಯೋಗ ಅಲ್ಲಿನ ಕಾರ್ಮಿಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿತು.

ಕಳೆದ ತಿಂಗಳು ಕೇಂದ್ರ ಬೃಹತ್​ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು VISL ಕಾರ್ಖಾನೆ ಪುನಶ್ಚೇತನಕ್ಕೆ ಸುಮಾರು 8-10 ಸಾವಿರ ಕೋಟಿ ರೂ. ಹೂಡಿಕೆ ಮಾಡುವ ಕುರಿತು ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ, ಕೇಂದ್ರ ಸರ್ಕಾರವು, ಭದ್ರಾವತಿ ಟು ಚಿಕ್ಕಜಾಜೂರು ರೈಲು ಮಾರ್ಗಕ್ಕೆ ಸರ್ವೆ ಮಾಡಲು ಸೂಚಿಸಿದೆ. ಇದು ವಿಐಎಸ್ಎಲ್ ಕಾರ್ಮಿಕರಲ್ಲಿ ಆಶಾಭಾವ ಮೂಡುವಂತೆ ಮಾಡಿದೆ.

ನಿಯೋಗದಲ್ಲಿ ಕೇಂದ್ರ ಉಕ್ಕು ಸಚಿವಾಲಯದ ಕಾರ್ಯದರ್ಶಿ ಸಂದೀಪ್ ಫೌಂಡ್ರಿಕ್​​ ಅವರ ಜೊತೆ ಕೇಂದ್ರ ಉಕ್ಕು ಸಚಿವಾಲಯದ ಜಂಟಿ ಕಾರ್ಯದರ್ಶಿ ಅಭಿಜಿತ್ ನರೇಂದ್ರ, ಭಾರತೀಯ ಉಕ್ಕು ಪ್ರಾಧಿಕಾರದ(ಸೈಲ್) ಅಧ್ಯಕ್ಷ ಅಮರೇಂದು ಪ್ರಕಾಶ್​ ಹಾಗೂ ತಾಂತ್ರಿಕ ನಿರ್ದೇಶಕ ಎಂ.ಆರ್​.ಗುಪ್ತಾ ಇದ್ದರು.

ಈ ನಿಯೋಗವು ಕಾರ್ಖಾನೆಯ ಪ್ರೈಮರಿ ಮಿಲ್​, ಬ್ಲಾಸ್ಟ್​ ಫರ್ನೆಸ್​ ಹಾಗೂ ಮೆಶನರಿ ವಿಭಾಗಕ್ಕೆ ಭೇಟಿ ನೀಡಿತು. ಈ ವೇಳೆ ನಿಯೋಗದವರು ಕಾರ್ಖಾನೆಯ ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿ, ಅದರ ಪುನಶ್ವೇತನಕ್ಕೆ ಬೇಕಾದ ತಾಂತ್ರಿಕ ಅಂಶಗಳ ಬಗ್ಗೆ ಕಾರ್ಮಿಕ ಸಂಘಟನೆಗಳ ಜೊತೆ ಚರ್ಚೆ ನಡೆಸಿದರು.

ನಿಯೋಗ ಭೇಟಿ ಕುರಿತು ಮಾಹಿತಿ ನೀಡಿದ ವಿಐಎಸ್​ಎಲ್ ಕಾರ್ಮಿಕ ಸಂಘದ ಕಾರ್ಯದರ್ಶಿ ಅಮೃತ್​, ಕೇಂದ್ರದ ನಿಯೋಗವು, ಕಾರ್ಖಾನೆಯ ಪುನಶ್ಚೇತನಕ್ಕೆ ಬೇಕಾದ ಎಲ್ಲಾ ಮಾಹಿತಿಗಳನ್ನು ಪಡೆದುಕೊಂಡಿದೆ. ನಮ್ಮ ಕಾರ್ಮಿಕ ಸಂಘದ ಜೊತೆ ಚರ್ಚೆ ನಡೆಸಿ, ಹಾಲಿ ಕಾರ್ಖಾನೆಯ ಪರಿಸ್ಥಿತಿಯನ್ನು ಅವಲೋಕಿಸಿದೆ ಎಂದು ತಿಳಿಸಿದರು.

ಕೇಂದ್ರ ತಂಡದ ಭೇಟಿಯು ನಮಗಷ್ಟೆ ಅಲ್ಲದೆ, ಭದ್ರಾವತಿ ಜನತೆಗೂ ಸಂತಸ ತಂದಿದೆ. ಇದರಿಂದ ಕಾರ್ಖಾನೆಯ ಪುನಶ್ಚೇತನ ಮಾಡುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ನಿಯೋಗವೂ ಸಹ ಕಾರ್ಖಾನೆ ಪುನಶ್ಚೇತನಕ್ಕೆ ಪೂರಕವಾಗಿ ಸ್ಪಂದಿಸಿದೆ. ನಮ್ಮ ಕಾರ್ಮಿಕ ಸಂಘಟನೆಯು ಹಾಲಿ ಕಾರ್ಖಾನೆಯಲ್ಲಿನ ಸ್ಥಿತಿಗತಿ ಬಗ್ಗೆ ವಿವರ ನೀಡಿದ್ದು, 2.5 ಮಿಲಿಯಲ್ ಟನ್​ ಉಕ್ಕು ಉತ್ಪಾದನೆಗೆ ಬೇಕಾದ ಭೂಮಿ ನಮ್ಮಲ್ಲಿ ಇದೆ. ಹಾಲಿ ಇರುವ ಮಿಷನರಿಗಳನ್ನು ತೆಗೆದು ನೂತನ ತಾಂತ್ರಿಕತೆಯಿಂದ ಕೂಡಿರುವ ಮಿಷನ್ ಅಳವಡಿಸುವಂತೆ ತಿಳಿಸಲಾಗಿದೆ ಎಂದರು.

ಅಲ್ಲದೆ, ಕಾರ್ಖಾನೆಗೆ ಸಂಡೂರು ತಾಲೂಕಿನ ಬಾವಿಹಳ್ಳಿ ಬಳಿ 2011ರಲ್ಲಿ ಮಂಜೂರಾಗಿದ್ದ 140 ಹೆಕ್ಟೇರ್​ ಭೂಮಿ ಹಾಗೂ ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ರಮಣದುರ್ಗದಲ್ಲಿ ಮಂಜೂರು ಮಾಡಿರುವ 60 ಹೆಕ್ಟೇರ್ ಭೂಮಿಯು ಕೇಂದ್ರದ ಅರಣ್ಯ ಇಲಾಖೆಯ ಪರಿಶೀಲನೆಯಲ್ಲಿ ಇರುವ ಬಗ್ಗೆ ಮಾಹಿತಿ ನೀಡಲಾಗಿದೆ. ಸೈಲ್​ ತನ್ನ ಇತರೆ ಕಾರ್ಖಾನೆಗಳಿಗಿಂತ ವಿಐಎಸ್ಎಲ್​ಗೆ ಹೆಚ್ಚಿನ ಬಂಡವಾಳ ಹೂಡಿಕೆ ಮಾಡಬೇಕೆಂದು ಮನವಿ ಮಾಡಲಾಗಿದೆ ಎಂದು ಕಾರ್ಮಿಕ ಸಂಘದ ಕಾರ್ಯದರ್ಶಿ ತಿಳಿಸಿದ್ದಾರೆ.

[pj-news-ticker]