ಹೈದರಾಬಾದ್: ತೆಲಂಗಾಣದ ಬಿಆರ್‌ಎಸ್ ಪಕ್ಷದ ಶಾಸಕಿ ಲಾಸ್ಯಾ ನಂದಿತಾ ಅವರು ಹೈದರಾಬಾದ್‌ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಭಾರತ ರಾಷ್ಟ್ರ ಸಮಿತಿಯಿಂದ ಮೊದಲ ಭಾರಿಗೆ ವಿಧಾನಸಭೆ ಪ್ರವೇಶಿಸಿದ್ದ 37 ವರ್ಷದ ಲಾಸ್ಯಾ ಅವರು ಪ್ರಯಾಣಿಸುತ್ತಿದ್ದ ಕಾರು, ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿತ್ತು.
ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಲಾಸ್ಯಾ ನಂದಿತಾ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ವೇಳೆ ಅವರು ಮೃತಪಟ್ಟಿದ್ದಾರೆ. ಲಾಸ್ಯಾ ಅವರ ಕಾರು ಚಾಲನೆ ಮಾಡುತ್ತಿದ್ದ ಚಾಲಕ ತೀವ್ರವಾಗಿ ಗಾಯಗೊಂಡಿದ್ದಾರೆ. ಅವರಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.
ಕೇವಲ ಹತ್ತು ದಿನಗಳ ಮುಂಚೆಯಷ್ಟೇ ಶಾಸಕಿ ಲಾಸ್ಯಾ ನಂದಿತಾ ಅವರು ನಾರ್ಕಟ್‌ಪಲ್ಲಿಯಲ್ಲಿ ಸಂಭವಿಸಿದ್ದ ಇನ್ನೊಂದು ಅಪಘಾತದಲ್ಲಿ ಚಿಕ್ಕಪುಟ್ಟ ಗಾಯಗಳಿಂದ ಬಚಾವಾಗಿದ್ದರು. ಫೆಬ್ರವರಿ 13ರಂದು ರಾಲಿಯೊಂದರಲ್ಲಿ ಭಾಗವಹಿಸಲು ನಾಲ್ಗೊಂಡಕ್ಕೆ ತೆರಳುವ ವೇಳೆ ಅಪಘಾತ ಸಂಭವಿಸಿತ್ತು. ಈ ಅಪಘಾತದಲ್ಲಿ ಲಾಸ್ಯಾ ಅವರ ಹೋಮ್ ಗಾರ್ಡ್ ಮೃತಪಟ್ಟಿದ್ದರು.
ಆದರೆ ಶುಕ್ರವಾರ ಮುಂಜಾನೆ ಸಂಭವಿಸಿದ ಅಪಘಾತದಲ್ಲಿ ಅವರಿಗೆ ಬದುಕುಳಿಯುವ ಅದೃಷ್ಟ ಇರಲಿಲ್ಲ. ಹೈದರಾಬಾದ್‌ನ ಹೊರವಲಯದ ಪತಂಚೇರುದಲ್ಲಿನ ಹೊರ ವರ್ತುಲ ರಸ್ತೆಯಲ್ಲಿ ಸಂಭವಿಸಿದ ಅಪಘಾತ ಅವರ ದುರಂತ ಸಾವಿಗೆ ಕಾರಣವಾಗಿದೆ.
“ಅಪಘಾತದಲ್ಲಿ ಶಾಸಕಿ ಮೃತಪಟ್ಟಿದ್ದಾರೆ. ಚಾಲಕನಿಗೆ ಗಾಯವಾಗಿದ್ದು, ಪ್ರಜ್ಞಾಹೀನರಾಗಿದ್ದಾರೆ. ಶಾಸಕಿ ಮುಂದಿನ ಸೀಟಿನಲ್ಲಿ ಕುಳಿತಿದ್ದರು. ಅವರ ಜತೆ ಗನ್‌ಮ್ಯಾನ್ ಮತ್ತು ಇತರರು ಸಹ ಕಾರಿನಲ್ಲಿದ್ದರು” ಎಂದು ಇನ್‌ಸ್ಪೆಕ್ಟರ್ ಪ್ರವೀಣ್ ರೆಡ್ಡಿ ತಿಳಿಸಿದ್ದಾರೆ.