ಶಿವಮೊಗ್ಗ: ಇಂದು ಪ್ರಕಟವಾದ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಜಿಲ್ಲೆಯ ಮೂವರು ವಿದ್ಯಾರ್ಥಿಗಳು 625 ಕ್ಕೆ 625 ಅಂಕಗಳನ್ನು ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಶಿವಮೊಗ್ಗದ ರಾಮಕೃಷ್ಣ ವಿದ್ಯಾನಿಕೇತನ ಶಾಲೆಯ ನಿತ್ಯಾ ಕುಲಕರ್ಣಿ, ಪ್ರಿಯದರ್ಶಿನಿ ಶಾಲೆಯ ನಮನ ಹಾಗೂ ಆದಿಚುಂಚನಗಿರಿ ಶಾಲೆಯ ಸಹಿಷ್ಣು ಅವರು 625 ಅಂಕಗಳನ್ನು ಪಡೆದುಕೊಂಡಿದ್ದಾರೆ. ತಮ್ಮ ಮಕ್ಕಳ ಸಾಧನೆಯನ್ನು ನೋಡಿ ಪೋಷಕರು ಹಾಗೂ ಶಿಕ್ಷಕರು ಸಂತಸ ಪಟ್ಟಿದ್ದಾರೆ.
ಶಿವಮೊಗ್ಗದ ರಾಮಕೃಷ್ಣ ವಿದ್ಯಾನಿಕೇತನದ 10ನೇ ತರಗತಿಯ ವಿದ್ಯಾರ್ಥಿನಿ ನಿತ್ಯಾ ಎಂ. ಕುಲಕರ್ಣಿ ಅವರು 625ಕ್ಕೆ 625 ಅಂಕಗಳನ್ನು ಪಡೆದುಕೊಂಡಿದ್ದಾರೆ. ನಿತ್ಯಾ ಅವರು ಇಂದು ಫಲಿತಾಂಶವನ್ನು ನೋಡಿ ತಮ್ಮ ಸಂತಸವನ್ನು ಹಂಚಿಕೊಳ್ಳಲು ಶಾಲೆಗೆ ಆಗಮಿಸಿದರು. ಈ ವೇಳೆ ಶಾಲೆಯ ಪ್ರಾಂಶುಪಾಲರು ಹಾಗೂ ಶಿಕ್ಷಕರು ನಿತ್ಯಾರಿಗೆ ಸಿಹಿ ತಿನಿಸಿ ಶುಭಕೋರಿದರು. ಈ ವೇಳೆ ನಿತ್ಯಾ ಅವರು ತಮ್ಮ ಶಾಲೆಯ ಶಿಕ್ಷಕರ ಕಾಲಿಗೆ ಬಿದ್ದು ನಮಸ್ಕಾರ ಮಾಡಿ, ಆಶೀರ್ವಾದ ಪಡೆದುಕೊಂಡರು. ಮಗಳ ಶಿಕ್ಷಣಕ್ಕಾಗಿಯೇ ಕಲ್ಬುರ್ಗಿಯಿಂದ ಶಿವಮೊಗ್ಗಕ್ಕೆ ಆಗಮಿಸಿದ ಕುಲಕರ್ಣಿ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ.
