Trending

ಬೆಳಗಾವಿಯಲ್ಲಿ ಸಿದ್ದರಾಮಯ್ಯಗೆ ಬಿಜೆಪಿ‌ ಕಾರ್ಯಕರ್ತೆಯರಿಂದ ಕಪ್ಪು ಬಾವುಟ ಪ್ರದರ್ಶನ : ಇಬ್ಬರು ಪೊಲೀಸ್ ಕಾನ್ಸ್ಟೇಬಲ್ಸ್ ಸಸ್ಪೆಂಡ್

Spread the love

ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಭಾಷಣಕ್ಕೆ ಬಿಜೆಪಿ‌ ಮಹಿಳಾ ಕಾರ್ಯಕರ್ತೆಯರು ಅಡ್ಡಿಪಡಿಸಿ, ಕಪ್ಪು ಬಾವುಟ ಪ್ರದರ್ಶಿಸಿದ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಪೊಲೀಸ್ ಕಾನ್​ಸ್ಟೇಬಲ್​ಗಳನ್ನು ಅಮಾನತುಗೊಳಿಸಿ ಉತ್ತರ ವಲಯ ಐಜಿಪಿ ಚೇತನಸಿಂಗ್ ರಾಥೋಡ್ ಆದೇಶ ಹೊರಡಿಸಿದ್ದಾರೆ. ಖಡೇಬಜಾರ್ ಠಾಣೆಯ ಕಾನ್​ಸ್ಟೇಬಲ್​ ಬಿ.ಎ.ನೌಕುಡಿ, ಕ್ಯಾಂಪ್ ಠಾಣೆ ಕಾನ್​ಸ್ಟೇಬಲ್​ ಮಲ್ಲಪ್ಪ ಹಡಗಿನಾಳ ಅಮಾನತಾಗಿದ್ದಾರೆ.

ಬೆಳಗಾವಿ ಸಿಪಿಎಡ್ ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಬಿಜೆಪಿ ಕಾರ್ಯಕರ್ತೆಯರು ಭಾಷಣಕ್ಕೆ ಅಡ್ಡಿಪಡಿಸಿದ್ದಕ್ಕೆ ಸಿಎಂ ಸಿಡಿಮಿಡಿಗೊಂಡಿದ್ದರು. ಇದೇ ವೇಳೆ ಕೋಪದಲ್ಲಿ ಸಿಎಂ, ವೇದಿಕೆ‌ ಮೇಲೆಯೇ ಧಾರವಾಡ ಹೆಚ್ಚುವರಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ನಾರಾಯಣ ಭರಮನಿ ಅವರ ಮೇಲೆ ಕೈ ಎತ್ತಿದ ಪ್ರಸಂಗವೂ ನಡೆದಿತ್ತು. ಇದಕ್ಕೆ ಎಲ್ಲೆಡೆ ಟೀಕೆಗಳು ಬಂದಿದ್ದವು.

ಸಿಎಂ ಕಾರ್ಯಕ್ರಮದ ವೇದಿಕೆ ಬಳಿ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಅಮಾನತು: ವೇದಿಕೆ ಮುಂಭಾಗದಲ್ಲಿ ಎಎಸ್​ಪಿ, ಎಸಿಪಿ ದರ್ಜೆಯ ಅಧಿಕಾರಿಗಳನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಹೀಗಿದ್ದರೂ ಕಾನ್​ಸ್ಟೇಬಲ್​​ ದರ್ಜೆಯ ಸಿಬ್ಬಂದಿಗಳನ್ನು ಅಮಾನತು ಮಾಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ವಿಶೇಷವೆಂದರೆ, ಅಮಾನತುಗೊಂಡ ಇಬ್ಬರೂ ಸಿಬ್ಬಂದಿ ವೇದಿಕೆ ಬಳಿ ಕರ್ತವ್ಯದಲ್ಲಿ ಇರಲಿಲ್ಲ. ಬಿ.ಎ.ನೌಕುಡಿ ಚನ್ನಮ್ಮ ವೃತ್ತದಲ್ಲಿ ಹಾಗೂ ಮಲ್ಲಪ್ಪ ಹಡಗಿನಾಳ ಅವರನ್ನು ಬೇರೆಡೆ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಹೀಗಿದ್ದರೂ ಇಬ್ಬರನ್ನೂ ಅಮಾನತು ಮಾಡಲಾಗಿದೆ.

ಗುಪ್ತ ಮಾಹಿತಿ ಸಂಗ್ರಹಿಸಿ ಪ್ರತಿಭಟನೆ ತಡೆಯುವಲ್ಲಿ ವಿಫಲವಾಗಿದ್ದಕ್ಕೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅಮಾನತು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

[pj-news-ticker]