Trending

ಶಿವಮೊಗ್ಗ: 3,000 ರೂ. ಲಂಚ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತರ ಬಲೆಗೆ ಬಿದ್ದ ಕಂದಾಯ ನಿರೀಕ್ಷಕ

Spread the love

ಶಿವಮೊಗ್ಗ: ರೈತರೊಬ್ಬರ ಜಮೀನು ಸಮತಟ್ಟು ಮಾಡೋದಕ್ಕೆ ಅನುಮತಿ ನೀಡಲು 3,000 ಲಂಚ ಸ್ವೀಕರಿಸುತ್ತಿದಾಗಲೇ ತಾಳಗುಪ್ಪ ಗ್ರಾಮ ಪಂಚಾಯತಿಯ ಕಂದಾಯ ನಿರೀಕ್ಷಕ ಮಂಜುನಾಥ್ ಅವರನ್ನು ಲೋಕಾಯುಕ್ತ ಪೊಲೀಸರು ರೆಡ್ ಹ್ಯಾಂಡ್ ಹಿಡಿದು, ಪ್ರಕರಣ ದಾಖಲಿಸಿದ್ದಾರೆ.

ಈ ಕುರಿತಂತೆ ಶಿವಮೊಗ್ಗ ಜಿಲ್ಲಾ ಲೋಕಾಯುಕ್ತದಿಂದ ಮಾಹಿತಿ ನೀಡಲಾಗಿದೆ. ತಮ್ಮ ಶಿರೂರು ಗ್ರಾಮದ ಸರ್ವೆ ನಂಬರ್ 125ರಲ್ಲಿ ತಗ್ಗು-ಉಬ್ಬುಗಳಿಂದ ಕೂಡಿದ್ದ ಎರಡು ಎಕರೆ ಜಮೀನಿನನ್ನು ಸಮತಟ್ಟು ಮಾಡುತ್ತಿದ್ದಾಗ, ಮಂಜುನಾಥ್ ಸ್ಥಳಕ್ಕೆ ಬಂದು ಕೆಲಸ ನಿಲ್ಲಿಸುವಂತೆ ಒತ್ತಾಯಿಸಿದ್ದರು. ಅಲ್ಲದೇ ಹಣ ನೀಡುವಂತೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಫೋನ್ ಪೇನಲ್ಲಿ ರೂ. 2,500 ಹಾಗೂ ರೂ. 500 ಹಣವನ್ನು ನೇರವಾಗಿ ಪಡೆದಿದ್ದು, ಮತ್ತೆ ರೂ. 3,000 ನೀಡುವಂತೆ ಬೇಡಿಕೆ ಇಟ್ಟಿದ್ದರೆಂದು ಆರೋಪಿಸಿ ತಾಳಗುಪ್ಪ ಹೋಬಳಿಯ ಶಿರೂರು ಗ್ರಾಮದ ಮುಂಡಿಗೆಹಳ್ಳಿಯ ರೈತ ಹೆಚ್ ಎಸ್ ಕೃಷ್ಣಮೂರ್ತಿ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು.

ಈ ದೂರು ಆಧರಿಸಿ ಇಂದು ಸಾಗರ ತಾಲೂಕಿನ ಶಿರೂರು ಆಲಳ್ಳಿ ಗ್ರಾಮದ ಸುಳ್ಳೂರು ಕೆರಿಯಪ್ಪ ಎಂಬುವರ ಜಮೀನಿನ ಹತ್ತಿರದ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ರೈತ ಕೃಷ್ಣಮೂರ್ತಿ ಅವರಿಂದ 3,000 ಲಂಚದ ಹಣ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ, ಮಂಜುನಾಥ್ ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಮಂಜುನಾಥ್ ವಿರುದ್ಧ ಕಲಂ 7(ಎ) ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988 (ತಿದ್ದುಪಡಿ ಕಾಯ್ದೆ-2018)ರ ಅನುಸಾರ ಪ್ರಕರಣ ದಾಖಲಿಸಿಕೊಂಡು ವಶಕ್ಕೆ ಪಡೆದುಕೊಳ್ಳಲಾಗಿದೆ. ದಾಳಿಯ ವೇಳೆ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್​ಪೆಕ್ಟರ್ ವೀರಬಸಪ್ಪ ಎಲ್. ಕುಸಲಾಪುರ ಹಾಗೂ ತಂಡ ವಿಚಾರಣೆ ನಡೆಸುತ್ತಿದೆ.

[pj-news-ticker]