ವಿಜಯಪುರ: ಕೆಲ ದಿನಗಳ ಹಿಂದೆ ಬಿಜೆಪಿಯಿಂದ ಆರು ವರ್ಷಗಳ ಕಾಲ ಉಚ್ಚಾಟನೆಗೊಂಡಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ದೊಡ್ಡ ಸುದ್ದಿಯೊಂದನ್ನು ಬಹಿರಂಗಪಡಿಸಿದ್ದಾರೆ. ಶನಿವಾರ ʼಕ್ಷಮೆ ಕೇಳುವುದಿಲ್ಲ, ಬೇರೆ ಪಕ್ಷವನ್ನೂ ಕಟ್ಟುವುದಿಲ್ಲʼ ಎಂದು ಹೇಳಿದ್ದ ಯತ್ನಾಳ್, ಯುಗಾದಿ ದಿನವಾದ ಇಂದು, ʼಹೊಸ ಪಕ್ಷʼ ಕಟ್ಟುವ ಸುಳಿವು ನೀಡಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಹಾಭ್ರಷ್ಟ. ನಕಲಿ ಸಹಿ, ಪಿಎಸ್ ಐ ಹಗರಣದಲ್ಲಿ ಹೆಸರಿದೆ. ಇದೇ ವಿಜಯೇಂದ್ರ ಮತ್ತು ಕುಟುಂಬ ರಾಜಕಾರಣ ಮುಂದುವರೆಸಿದರೆ, ಪರ್ಯಾಯ ಮಾರ್ಗ ಕಂಡುಕೊಳ್ಳಬೇಕಾಗುತ್ತದೆ ಎಂದಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಬಹಳ ಜನ ರಾಜ್ಯದಲ್ಲಿ ಹಿಂದೂ ಪಕ್ಷ ಕಟ್ಟಬೇಕು ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಜನಜಾಗೃತಿ ಮೂಡಿಸಲಾಗುತ್ತದೆ. ರಾಜ್ಯಾದ್ಯಂತ ಸಂಚರಿಸಿ, ಜನಾಭಿಪ್ರಾಯ ಸಂಗ್ರಹ ಮಾಡಲಾಗುತ್ತದೆ. ಜನಾಭಿಪ್ರಾಯ ಪ್ರಕಾರ ಹೊಸ ರಾಜಕೀಯ ಪಕ್ಷ, ಗುಂಪು ಕಟ್ಟಲು ಸಿದ್ಧರಿದ್ದೇವೆ ಎಂದು ತಿಳಿಸಿದರು.
ನಮಗೆ ಇಲ್ಲಿ ಭವಿಷ್ಯ ಕಾಣುತ್ತಿಲ್ಲ. ಹಿಂದು ನಾಯಕರನ್ನು ಮೂಲೆಗುಂಪು ಮಾಡಲಾಗುತ್ತಿದೆ. ಹೊಸ ರಾಜಕೀಯ ಗುಂಪು ಆಗಲಿ ಎಂದು ಜನಾಭಿಪ್ರಾಯ ಬಂದರೆ, ವಿಜಯದಶಮಿಗೆ ನೂರಕ್ಕೆ ನೂರರಷ್ಟು ನಾವು ರಾಜಕೀಯ ಪಕ್ಷ ಉದ್ಘಾಟನೆ ಮಾಡುತ್ತೇವೆ ಎಂದರು.
ಯಡಿಯೂರಪ್ಪ, ವಿಜಯೇಂದ ಬಿಟ್ಟು ಬೇರೆ ಯಾರೂ ಬೆಳೆಯಬಾರದು ಎಂಬ ಷಡ್ಯಂತ್ರವಿದೆ. ಯಡಿಯೂರಪ್ಪ, ವಿಜಯೇಂದ್ರರರೇ ಪಕ್ಷಕ್ಕೆ ಅನಿವಾರ್ಯವಾದರೆ, ವಿಜಯೇಂದ್ರ ಅಧ್ಯಕ್ಷರಾಗಿ ಮುಂದುವರಿಸಿದರೆ ಅದು ಪಕ್ಷದ ಕರ್ಮ ಎಂದು ಯತ್ನಾಳ್ ತಮ್ಮ ವಾಗ್ದಾಳಿ ಮುಂದುವರಿಸಿದರು.
ವಿಜಯೇಂದ್ರ ಅವರದು ಸಿದ್ದರಾಮಯ್ಯ ಅವರೊಂದಿಗೆ ಹೊಂದಣಿಕೆ ಇದೆ. ಡಿ.ಕೆ.ಶಿವಕುಮಾರ್ ಅವರೊಂದಿಗೆ ಬಿಜಿನೆಸ್ ಇದೆ. ಜಮೀರ್ ಅಹ್ಮದ್ ಜತೆಗೆ ಸರಸ ಸಲ್ಲಾಪ ಇದೆ ಎಂದು ದೂರಿದರು.
