ಬೆಂಗಳೂರು : ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಇಂಗ್ಲಿಷ್ ಮತ್ತು ಕನ್ನಡ ಎರಡೂ ಭಾಷೆಯಲ್ಲೂ ಬೋಧನೆಯ ಸೌಲಭ್ಯವನ್ನು ಕಲ್ಪಿಸಲು ಸರ್ಕಾರ ಚಿಂತನೆ ನಡೆಸಿದ್ದು, ಮಾಧ್ಯಮದ ಆಯ್ಕೆ ಸ್ವಾತಂತ್ರ್ಯವನ್ನು ಪೋಷಕರಿಗೆ ನೀಡಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ವಿಧಾನಸಭೆಯ ಪ್ರಶ್ನೋತ್ತರದ ಅವಧಿಯಲ್ಲಿ ತೀರ್ಥಹಳ್ಳಿಯ ಶಾಸಕ ಅರಗ ಜ್ಞಾನೇಂದ್ರ ತಮ್ಮ ಕ್ಷೇತ್ರದಲ್ಲಿ ಹಲವು ಶಾಲೆಗಳನ್ನು ಇಂಗ್ಲೀಷ್ ಮಾಧ್ಯಮಕ್ಕೆ ಪರಿವರ್ತಿಸಿಕೊಡಲು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ವಿದ್ಯಾರ್ಥಿಗಳ ಸಂಖ್ಯಾ ಕೊರತೆ ಕಾರಣಕ್ಕಾಗಿ ಅನುಮತಿ ನಿರಾಕರಿಸಲಾಗುತ್ತಿದೆ. ಪೋಷಕರಿಗೆ ತಮ್ಮ ಮಕ್ಕಳನ್ನು ಇಂಗ್ಲೀಷ್ ಮಾಧ್ಯಮದಲ್ಲಿ ಓದಿಸುವ ಹಪಾಹಪಿ ಹೆಚ್ಚಾಗಿದೆ. ಕಷ್ಟಪಟ್ಟಾದರೂ ಹಣ ಖರ್ಚು ಮಾಡಿ ದೂರದೂರುಗಳಿಗೆ ಖಾಸಗಿ ಇಂಗ್ಲೀಷ್ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮಕ್ಕೆ ಅವಕಾಶ ನೀಡದೇ ಇದ್ದರೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುವುದಿಲ್ಲ. ಸಹಜವಾಗಿಯೇ ಹಲವು ಶಾಲೆಗಳನ್ನು ಮುಚ್ಚಬೇಕಾಗುತ್ತದೆ. ಕಡಿಮೆ ಅಂಕ ಪಡೆದ ಶಿಕ್ಷಕರು ಖಾಸಗಿ ಶಾಲೆಗಳಲ್ಲಿ ಇಂಗ್ಲೀಷ್ ಬೋಧಿಸಬಹುದಾದರೆ ರ್ಯಾಂಕ್‍ನಲ್ಲಿ ನೇಮಕಾತಿಗೊಂಡಿರುವ ಸರ್ಕಾರಿ ಶಾಲಾ ಶಿಕ್ಷಕರಿಂದ ಇಂಗ್ಲೀಷ್ ಕಲಿಸಲು ಸಾಧ್ಯವಿಲ್ಲವೇ? ಹಿರಿಯ ಅಧಿಕಾರಿಗಳು ತಮ್ಮ ಮಕ್ಕಳನ್ನು ಒಳ್ಳೆಯ ಶಾಲೆಗೆ ಸೇರಿಸಿ ಐಎಎಸ್, ಐಪಿಎಸ್ ಮಾಡಬೇಕೆಂದು ಬಯಸುತ್ತಾರೆ. ಗ್ರಾಮೀಣ ಭಾಗದ ಮಕ್ಕಳನ್ನು ನಿಯಮದ ನೆಪವೊಡ್ಡಿ ಬದುಕನ್ನು ಹಾಳುಮಾಡುತ್ತಿದ್ದಾರೆ ಎಂದರು.
ಇದಕ್ಕೆ ಉತ್ತರ ನೀಡಿದ ಸಚಿವ ಮಧು ಬಂಗಾರಪ್ಪ, ಶಾಸಕರ ಮಾತು ಅಕ್ಷರಶಃ ನಿಜ. ಇಂಗ್ಲೀಷ್‍ಗೆ ಬೇಡಿಕೆ ಹೆಚ್ಚಾಗಿದೆ. ಅದರ ಜೊತೆಗೆ ಕನ್ನಡ ಮಾಧ್ಯಮವನ್ನೂ ಉಳಿಸಲು ಸರ್ಕಾರ ಬದ್ಧವಾಗಿದೆ. ಕಳೆದ 2 ವರ್ಷಗಳಿಂದಲೂ 59 ಇಂಗ್ಲೀಷ್ ಮಾಧ್ಯಮ ಶಾಲೆಗಳಿಗೆ ಆದ್ಯತೆ ನೀಡಲಾಗಿದೆ. ಕೆಲವೆಡೆ ವಿದ್ಯಾರ್ಥಿಗಳ ಕೊರತೆಯಿದೆ. ಮೂಲ ಸೌಲಭ್ಯದ ಸಮಸ್ಯೆ ಕೂಡ ಇದೆ. ನಮ್ಮ ಸರ್ಕಾರ ಸಾಮಾಜಿಕ ಹೊಣೆಗಾರಿಕೆ ನಿಯನ್ನು ಬಳಸಿಕೊಂಡು ಮೂಲಸೌಲಭ್ಯ ಹೆಚ್ಚಿಸಿ, ಇಂಗ್ಲೀಷ್ ಮಾಧ್ಯಮ ಸರ್ಕಾರಿ ಶಾಲೆಗೂ ಹಣ ಕೊಟ್ಟು ಸೇರಿಸಬೇಕಾದಂತಹ ಮಟ್ಟಕ್ಕೆ ಸುಧಾರಣೆ ತರಲಾಗುವುದು ಎಂದು ಹೇಳಿದರು.
2025 ರ ವೇಳೆಗೆ 500 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. ಹಂತಹಂತವಾಗಿ ಈ ಸಂಖ್ಯೆಯನ್ನು ಹೆಚ್ಚಿಸಲಾಗುವುದು. ಶಿಕ್ಷಕರು ಮೂಲಸೌಲಭ್ಯಕ್ಕೆ ಒತ್ತು ನೀಡಲಾಗುವುದು. ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಕರೆತರಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಸಭಾಧ್ಯಕ್ಷರು ಸೇರಿದಂತೆ ಹಲವರು ಈ ವಿಚಾರ ಕುರಿತು ಚರ್ಚೆಗೆ ಆಸಕ್ತಿ ತೋರಿಸಿ, ಇದು ರಾಜ್ಯಮಟ್ಟದ ಸಮಸ್ಯೆಯಾಗಿರುವುದರಿಂದ ನಿಯಮ 69 ರ ಅಡಿ ಮತ್ತಷ್ಟು ಚರ್ಚೆಗೆ ಅವಕಾಶ ನೀಡುವುದಾಗಿ ಭರವಸೆ ನೀಡಿದರು.