ಪ್ರಯಾಗ್ರಾಜ್(ಉತ್ತರ ಪ್ರದೇಶ)/ಬೆಳಗಾವಿ: ಪವಿತ್ರ ಮಹಾಕುಂಭ ಮೇಳ ನಡೆಯುತ್ತಿರುವ ಇಲ್ಲಿನ ತ್ರಿವೇಣಿ ಸಂಗಮದ ಸಮೀಪ ತಡರಾತ್ರಿ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ 17 ಮಂದಿ ಭಕ್ತರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಇದೇ ವೇಳೆ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಕೆಲವರು ನಾಪತ್ತೆಯಾಗಿದೆ ಎಂದು ಇತ್ತೀಚಿನ ವರದಿಗಳು ತಿಳಿಸಿವೆ.
ಕಾಲ್ತುಳಿತದ ವೇಳೆ ನೂಕುನುಗ್ಗಲು ಉಂಟಾದಾಗ ಸ್ನಾನಕ್ಕೆ ಸೇರಿದ್ದ ಭಕ್ತರು ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಸ್ಥಳದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಶೂ, ಚಪ್ಪಲಿ, ಬಟ್ಟೆಗಳು ಘಟನೆಯ ಗಂಭೀರತೆಯನ್ನು ಸೂಚಿಸುತ್ತಿವೆ. ಈ ಹಿನ್ನೆಲೆಯಲ್ಲಿ ಕೆಲವು ಅಖಾರಾಗಳು ಇದೀಗ ಅಮೃತ ಸ್ನಾನವನ್ನು ತಾತ್ಕಾಲಿಕವಾಗಿ ರದ್ದು ಮಾಡಿದ್ದಾರೆ.
ಸಂಕಷ್ಟದಲ್ಲಿ ಬೆಳಗಾವಿಯ ಭಕ್ತರು: ಕಾಲ್ತುಳಿತದ ವೇಳೆ ಕರ್ನಾಟಕದ ಬೆಳಗಾವಿಯಿಂದ ತೆರಳಿದ್ದ ಕೆಲವರು ನಾಪತ್ತೆಯಾಗಿರುವ ಮಾಹಿತಿ ಲಭ್ಯವಾಗಿದೆ.
ಬೆಳಗಾವಿಯ ಮಹಿಳೆ ಸರೋಜಿನಿ ಅವರು, “ನಾವು ಎರಡು ಬಸ್ಗಳಲ್ಲಿ 60 ಜನ ಮಹಾಕುಂಭ ಮೇಳಕ್ಕೆ ಬಂದಿದ್ದೇವೆ. ಇದ್ದಕ್ಕಿದ್ದಂತೆ ಕಾಲ್ತುಳಿತ ಉಂಟಾಯಿತು. ನಮ್ಮ ಜೊತೆ ಬಂದರಲ್ಲಿ ನಾಲ್ಕೈದು ಜನ ಕಾಣುತ್ತಿಲ್ಲ. ನಮ್ಮದು ಒಂಭತ್ತು ಜನರ ಗುಂಪು ಇತ್ತು. ಇದರಲ್ಲಿ ಮೂರ್ನಾಲ್ಕು ಜನರು ಇಲ್ಲೇ ಇದ್ದಾರೆ. ಉಳಿದವರು ಕಾಣುತ್ತಿಲ್ಲ” ಎಂದು ಆತಂಕ ವ್ಯಕ್ತಪಡಿಸಿದರು.
