ಹುಬ್ಬಳ್ಳಿ: ಉಣಕಲ್ನ ಅಚ್ಚವ್ವನ ಕಾಲೋನಿಯಲ್ಲಿ ಸಂಭವಿಸಿದ ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ ಚಿಕಿತ್ಸೆ ಫಲಿಸದೇ ಇಂದು ಬೆಳಗ್ಗೆ ಮೃತಪಟ್ಟ ಅಯ್ಯಪ್ಪ ಮಾಲಾಧಾರಿ ನಿಜಲಿಂಗಪ್ಪ ಬೇಪೂರಿ ಮೃತದೇಹಕ್ಕಾಗಿ ಆತನ ಇಬ್ಬರು ಪತ್ನಿಯರು ಜಗಳಕ್ಕಿಳಿದ ಘಟನೆ ನಗರದ ಕಿಮ್ಸ್ ಶವಾಗಾರದ ಮುಂದೆ ನಡೆಯಿತು.
ನಿಜಲಿಂಗಪ್ಪ ಅವರ ಮೊದಲ ಪತ್ನಿ ನಿರ್ಮಲ ಅವರು ಆಂಬ್ಯುಲೆನ್ಸ್ನಲ್ಲಿ ಮೃತದೇಹವನ್ನು ತನ್ನ ಹುಟ್ಟೂರಾದ ಇಂಗಳಿಗೆ ಗ್ರಾಮಕ್ಕೆ ತಗೆದುಕೊಂಡು ಹೋಗಲು ಸಿದ್ಧರಾಗಿದ್ದರು. ಆಗ ಅವರನ್ನು ತಡೆದ ಎರಡನೇ ಪತ್ನಿ ಶಾಂತಾ ಅವರು ಶವವನ್ನು ಮೊದಲು ನನ್ನ ಮನೆಗೆ ತೆಗೆದಕೊಂಡು ಹೋಗುತ್ತೇನೆ ಎಂದು ಜಗಳ ತೆಗೆದರು.
ಇಷ್ಟು ದಿನ ನಾನು ಅವರನ್ನು ಸಾಕಿದ್ದೇನೆ. ಕೊನೆ ಗಳಿಗೆವರೆಗೂ ನನ್ನ ಗಂಡ ನನ್ನ ಜೊತೆಗೆ ಇದ್ದರು. ಸುಟ್ಟು ಗಾಯಗೊಂಡು ಆಸ್ಪತ್ರೆ ಸೇರಿದರೂ ಬಂದಿಲ್ಲ. ಈಗ ಪರಿಹಾರ ನೀಡುತ್ತಾರೆ ಎಂದು ಬಂದಿದ್ದಾರೆ ಎಂದು ಎರಡನೇ ಪತ್ನಿ ಶಾಂತಾ ಆರೋಪಿಸಿದರು.
ಮಧ್ಯೆ ಪ್ರವೇಶಿಸಿದ ಪೊಲೀಸರು, ಇಬ್ಬರ ಪತ್ನಿಯರ ನಡುವಿನ ಜಗಳ ಬಿಡಿಸಿದರು. ಎರಡನೇ ಪತ್ನಿ ಮನೆಯಲ್ಲಿ ಪೂಜೆ ಮಾಡಲು ಅವಕಾಶ ಕೊಡಬೇಕು. ಬಳಿಕ ಮೊದಲೇ ಪತ್ನಿ ಮನೆ ಊರಲ್ಲಿ ಅಂತ್ಯಕ್ರಿಯೆ ಮಾಡಲು ಸೂಚಿಸಿದ್ದರು. ಅದರಂತೆ ತಾಜನಗರದಲ್ಲಿರುವ ಎರಡನೇ ಪತ್ನಿ ಮನೆಯಲ್ಲಿ ಪೂಜೆ ನಡೆಸಿ ನಿಜಲಿಂಗಪ್ಪನ ಹುಟ್ಟೂರಲ್ಲಿ ಅಂತ್ಯಕ್ರಿಯೆ ನಡೆಯಿತು.
ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ ಗಾಯಗೊಂಡಿದ್ದ ಒಂಬತ್ತು ಅಯ್ಯಪ್ಪ ಮಾಲಾಧಾರಿಗಳ ಪೈಕಿ ಇಬ್ಬರು ಚಿಕಿತ್ಸೆ ಫಲಿಸದೇ ಇಂದು ಬೆಳಗಿನ ಜಾವ ಮೃತಪಟ್ಟಿದ್ದು, ಇನ್ನುಳಿದವರಿಗೆ ಚಿಕಿತ್ಸೆ ಮುಂದುವರೆದಿದೆ.
