ಬೆಂಗಳೂರು: ಪತ್ನಿಯಿಂದಾಗಿ ಪತಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತಹ ಮತ್ತೊಂದು ಘಟನೆ ನಗರದ ಮಹಾಲಕ್ಷ್ಮೀ ಲೇಔಟ್ನ ಮನೆಯಲ್ಲಿ ನಡೆದಿದೆ. ಪತ್ನಿ ಅನೈತಿಕ ಸಂಬಂಧಕ್ಕೆ ಬೇಸತ್ತು ಪತಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ.
ಲಾರಿ ಮಾಲೀಕ 45 ವರ್ಷದ ಸ್ವಾಮಿ ಮೃತ ಪತಿ. ಸ್ಥಳಕ್ಕೆ ಮಹಾಲಕ್ಷ್ಮೀ ಲೇಔಟ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಮೃತನ ಸಂಬಂಧಿ ನಾಗರಾಜ್ ಎಂಬುವವರು ಮಾಧ್ಯಮದವರೊಂದಿಗೆ ಮಾತನಾಡಿದ್ದು, ಮೃತ ಸ್ವಾಮಿ ಒಳ್ಳೆಯ ಮನುಷ್ಯ. ಮದುವೆ, ಮನೆ, ಮಕ್ಕಳು ಅಂತ ಇದ್ದವರು. ಆತನ ಪತ್ನಿ ಕಳೆದ ಎರಡು ವರ್ಷಗಳ ಹಿಂದೆ ಗುತ್ತಿಗೆ ಮೇಲೆ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕೆಲಸಕ್ಕೆ ಸೇರಿದ್ದರು.
ಆಗ ಅಲ್ಲಿ ಮೈಲಾರಾಪ್ಪ ಎಂಬುವವರು ಇದ್ದರು. ಆಗ ಅವರು ಯುನಿವರ್ಸಿಟಿ ರಿಜಿಸ್ಟರ್ ಆಗಿದ್ದರು. ಈಗ ನಿವೃತ್ತಿ ಹೊಂದಿದ್ದಾರೆ. ಅವರೊಂದಿಗೆ ಸಂಪರ್ಕ ಆಗಿದೆ. ಆ ಮೇಲೆ ಅವರ ಸಂಸಾರ ಹಾಳಾಗಿತ್ತು. ಈ ವಿಚಾರ ಮೈಲಾರಾಪ್ಪ ಪತ್ನಿಗೂ ಗೊತ್ತಿದ್ದು, ಅವರು ಸ್ವಾಮಿ ಮನೆಗೆ ಬಂದು ಬುದ್ಧಿ ಹೇಳಿದ್ದರು. ಆದರೆ ಸ್ವಾಮಿ ಪತ್ನಿ ಬಿಟ್ಟಿರಲಿಲ್ಲ.
ಇದಕ್ಕೆಲ್ಲಾ ಮನನೊಂದು ಸ್ವಾಮಿ ನಿನ್ನೆ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೊತೆಗೆ ಮೂರು ಪುಟಗಳ ಡೆತ್ ನೋಟ್ ಬರೆದು ಇಟ್ಟಿದ್ದಾರಂತೆ. ಅದು ನಮಗೆ ಸಿಕ್ಕಿಲ್ಲ. ಪೊಲೀಸರು ಮಹಜರು ಮಾಡಿದಾಗ ನೋಡಬೇಕು ಎಂದು ಹೇಳಿದ್ದಾರೆ.
