ಗದಗ : ಕರ್ನಾಟಕ ಸರ್ಕಾರ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ನೀಡುತ್ತಿರುವ 2000 ರೂ. ಹಣವನ್ನು ಕೂಡಿಟ್ಟು ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದ ಮಾಲಧಾರ ಓಣಿಯ ಅತ್ತೆ ಹಾಗೂ ಸೊಸೆ ಕೊಳವೆ ಬಾವಿ ಕೊರೆಸಿದ್ದಾರೆ. ಬೋರ್ವೆಲ್ನಲ್ಲಿ ಅವರಿಗೆ ನೀರು ಕೂಡ ದೊರೆತಿದೆ.ಇದೀಗ ಈ ಬಗ್ಗೆ ಅತ್ತೆ ಮಾಬುಬೀ ಹಾಗೂ ಸೊಸೆ ರೋಷನ್ ಬೇಗಂ ಹರ್ಷ ವ್ಯಕ್ತಪಡಿಸಿದ್ದಾರೆ.
ಅತ್ತೆ ಹಾಗೂ ಸೊಸೆ ಸೇರಿ ಗೃಹಲಕ್ಷ್ಮಿ ಯೋಜನೆಯಿಂದ ದೊರೆತ 44 ಸಾವಿರ ರೂ. ಕೊಳವೆ ಬಾವಿ ಕೊರೆಸಲು ನೀಡಿದ್ದಾರೆ. ಒಟ್ಟು 60 ಸಾವಿರ ರೂಪಾಯಿ ಖರ್ಚು ಆಗಿದೆ. ಅದರ ಗೃಹಲಕ್ಷ್ಮಿ ಯೋಜನೆಯ 44 ಸಾವಿರ ರೂ. ಬಳಕೆ ಮಾಡಿದ್ದಾರೆ. ಇನ್ನುಳಿದ್ದ ಹಣ ಮಗ ನೀಡಿದ್ದಾನೆ ಎಂದು ಮಾಬುಬೀ ತಿಳಿಸಿದ್ದಾರೆ.
ಸಿದ್ದರಾಮಯ್ಯ ಅವರು ನೀಡಿದ ಗೃಹಲಕ್ಷ್ಮಿ ಯೋಜನೆಯಿಂದ ತುಂಬಾ ಅನುಕೂಲವಾಗಿದೆ. ಸಿಎಂ ಸಿದ್ದರಾಮಯ್ಯ ಅವರಿಗೆ ನಾವು ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಮಾಬುಬೀ ಹೇಳಿದ್ದಾರೆ.
