ಮೈಸೂರು: ಇತ್ತೀಚಿನ ದಿನಗಳಲ್ಲಿ ಮೈಸೂರು ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಡ್ರಾಪೌಟ್ ಹೆಚ್ಚಾಗುತ್ತಿವೆ. ಇದಕ್ಕೆ ಶಿಕ್ಷಣದ ಗುಣಮಟ್ಟ ಕಡಿಮೆಯಾಗಿದೆ ಎಂದು ಅರ್ಥ. ಇದಕ್ಕೆ ಕಾರಣ ಏನು? ನೀವೇನು ಮಾಡುತ್ತಿದ್ದೀರಾ.? ಹೀಗೆ ಮೈಸೂರು ಜಿಲ್ಲೆಯ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಕ್ಲಾಸ್ ತೆಗೆದುಕೊಂಡರು.
ಸಭೆಯಲ್ಲಿ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಮೈಸೂರು ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಡ್ರಾಪೌಟ್ ಹೆಚ್ಚಾಗುತ್ತಿವೆ. ಅದಕ್ಕೆ ಕಾರಣ ಏನು..? ಮೈಸೂರಿನಲ್ಲಿ ಗುಣ ಮಟ್ಟದ ಶಿಕ್ಷಣ ಸಿಗುತ್ತಿಲ್ಲ ಎಂದು ಜಿಲ್ಲೆಯ ವಿದ್ಯಾರ್ಥಿಗಳು ಬೇರೆಡೆ ಹೋಗುತ್ತಿದ್ದಾರೆ. 2019 ರಿಂದ 2023 ರವರೆಗೆ 25 ಸಾವಿರ ಮಕ್ಕಳು ಡ್ರಾಪೌಟ್ ಆಗಿದ್ದಾರೆ. ಅಂದ್ರೆ ಇಲ್ಲಿನ ಮಕ್ಕಳು ಬೇರೆ ಜಿಲ್ಲೆಗಳ ಕಡೆ ಹೋಗುತ್ತಿದ್ದಾರೆ. ಮೈಸೂರಿನಲ್ಲಿ ಶಿಕ್ಷಣದ ಗುಣಮಟ್ಟ ಕಡಿಮೆಯಾಗಿದೆ ಎಂದು ಅರ್ಥ. ಇದಕ್ಕೆ ಕಾರಣ ಏನು? ನೀವೇನು ಮಾಡುತ್ತಿದ್ದೀರಾ.? ಎಂದು ತರಾಟೆ ತೆಗೆದುಕೊಂಡರು.
ಉಚಿತ ಊಟ, ಬಟ್ಟೆ, ಶೂ ಎಲ್ಲವನ್ನೂ ಕೊಟ್ಟರೂ ಯಾಕೆ ಮಕ್ಕಳು ಸರ್ಕಾರಿ ಶಾಲೆಗೆ ಬರುತ್ತಿಲ್ಲ, ಉತ್ತಮ ಶಿಕ್ಷಣ ಯಾಕೆ ನೀವು ಕೊಡಲಿಕ್ಕೆ ಆಗುತ್ತಿಲ್ಲ.? ಎಲ್ಲಿ ಈ ರೀತಿ ಸಮಸ್ಯೆ ಆಗುತ್ತಿದೆ ಎಂದು ಕಂಡು ಹಿಡಿದು ನನಗೆ ವರದಿ ಕೊಡಬೇಕು ಎಂದು ಸಚಿವ ಮಧು ಬಂಗಾರಪ್ಪ ಸೂಚಿಸಿದರು.ಸದ್ಯಕ್ಕೆ ಜಿಲ್ಲೆಯಲ್ಲಿ 21 ಶಾಲೆಗಳು ಮುಚ್ಚಿದ್ದವು ಈಗ ಮತ್ತೆ 12 ಶಾಲೆಗಳನ್ನು ಮತ್ತೆ ತೆರೆದಿದ್ದೇವೆ. ಈಗ ಮತ್ತೆ 362 ಮಕ್ಕಳು ಶಾಲೆಗೆ ಸೇರಿದ್ದಾರೆ. ತರಗತಿಗಳು ಆರಂಭವಾಗಿದೆ ಎಂದು ಮೈಸೂರು ಡಿಡಿಪಿಐ ಮಾಹಿತಿ ನೀಡಿದರು. ಈ ವೇಳೆ ಮೈಸೂರು ಜಿಲ್ಲೆಗೆ ಸಂಬಂಧಪಟ್ಟ ಎಲ್ಲಾ ಮಾಹಿತಿಯನ್ನ ಶಿಕ್ಷಣ ಸಚಿವ ಮಧು ಬಂಗಾರಪ್ಪ ಕಲೆ ಹಾಕಿದರು.
ಮಕ್ಕಳ ಕೈಯಲ್ಲಿ ಶೌಚಾಲಯ ಸ್ವಚ್ಛ ಕೆಲಸ ಮಾಡಿಸಬಾರದು- ಎಚ್ಚರಿಕೆ
ಎರಡೂ ಜಿಲ್ಲೆಗಳ ಶಿಕ್ಷಣ ಇಲಾಖೆ ಬೇಕಿರುವ ಮೂಲಭೂತ ಅವಶ್ಯಕತೆಗಳ ಕುರಿತು ಸಚಿವ ಮಧು ಬಂಗಾರಪ್ಪ ಕೇಳಿದರು. ಹೆಚ್ಚಿನ ಸಮಸ್ಯೆಗಳು ಕಂಡು ಬಂದಲ್ಲಿ ನಮ್ಮ ಗಮನಕ್ಕೆ ತನ್ನಿ. ಮಕ್ಕಳ ಕೈಯಲ್ಲಿ ಶೌಚಾಲಯ ಸ್ವಚ್ಛ ಮಾಡಿಸುವಂತಹ ಕೆಲಸವನ್ನ ಯಾರೂ ಮಾಡಿಸಬಾರದು. ಶಾಲಾ ಸ್ವಚ್ಛತೆಗೆ ಎಸ್ ಡಿಎಂ ಸಮಿತಿಗೆ ವಹಿಸಿ ಸರ್ಕಾರದಿಂದ ಸೌಲಭ್ಯಗಳನ್ನು ಒದಗಿಸುವ ಕೆಲಸವನ್ನು ಮಾಡುತ್ತೇವೆ. ಮಕ್ಕಳ ಕೈಯಲ್ಲಿ ಶೌಚಾಲಯ ಸ್ವಚ್ಛ ಕೆಲಸ ಮಾಡಿಸಬಾರದು ಎಂದು ಸಚಿವ ಎಚ್ಚರಿಕೆ ನೀಡಿದರು.