Trending

ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ : ರೇಣುಕಾಚಾರ್ಯ

Spread the love

ದಾವಣಗೆರೆ: ‘ವಕ್ಫ್ ಆಸ್ತಿ ವಿಚಾರವಾಗಿ ಪ್ರತ್ಯೇಕವಾಗಿ ಪಾದಯಾತ್ರೆ ಹೊರಟಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಕೂಡಲೇ ಪಕ್ಷದ ರಾಷ್ಟ್ರೀಯ ವರಿಷ್ಠರು ತಡೆಯಬೇಕು. ಇಲ್ಲದಿದ್ದರೆ ಅನಿವಾರ್ಯವಾಗಿ ನಾವೂ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರೊಂದಿಗೆ ಚರ್ಚಿಸಿ ಪ್ರತ್ಯೇಕ ಪಾದಯಾತ್ರೆ ನಡೆಸಬೇಕಾಗುತ್ತದೆ’ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೇಣುಕಾಚಾರ್ಯ ‘ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ರಾಜಕೀಯ ಏಳಿಗೆ ಸಹಿಸದ ಕೆಲವರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಪ್ರತ್ಯೇಕ ಪಾದಯಾತ್ರೆಯ ಹಗಲುವೇಷದ ನಾಟಕ ಮಾಡುತ್ತಿದ್ದು ಇದರಲ್ಲಿ ಅವರ ಸ್ವಹಿತಾಸಕ್ತಿಯೇ ಮುಖ್ಯವಾದಂತೆ ಕಾಣುತ್ತಿದೆ. ರಾಜ್ಯಾಧ್ಯಕ್ಷರನ್ನು ಹೊರಗಿಟ್ಟು ನಾನೇ ಮಹಾನಾಯಕ ಎಂದು ಬಿಂಬಿಸಿಕೊಂಡು ಯಾರ ಅನುಮತಿ ಪಡೆಯದೇ ನಡೆಸುವ ಅಭಿಯಾನಕ್ಕೆ ಕಾರ್ಯಕರ್ತರು ಕೈ ಜೋಡಿಸುವುದಿಲ್ಲ.

ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಯಲಿದ್ದು ಯಾವುದೇ ಸಂದರ್ಭದಲ್ಲಿ ಮುಖ್ಯಮಂತ್ರಿಯವರು ರಾಜೀನಾಮೆ ನೀಡಬೇಕಾಗಬಹುದು. ವಕ್ಫ್ ಆಸ್ತಿ ವಿಚಾರದ ಬಗ್ಗೆ ಹೋರಾಡಲು ರಾಜ್ಯದಲ್ಲಿ ರಾಜ್ಯಾಧ್ಯಕ್ಷರು, ವಿಧಾನಸಭೆ ಹಾಗೂ ವಿಧಾನಪರಿಷತ್ ಪ್ರತಿಪಕ್ಷದ ನಾಯಕರ ನೇತೃತ್ವದಲ್ಲಿ ಮೂರು ತಂಡ ಮಾಡಲಾಗಿದ್ದು ಈ ಮೂರು ನಾಯಕರ ತಂಡ ಬಿಟ್ಟು ಬೇರೆ ಪರ್ಯಾಯ ತಂಡಕ್ಕೆ ಅವಕಾಶವಿಲ್ಲ” ಎಂದರು.

‘ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಈಗಾಗಲೇ ವಾಲ್ಮೀಕಿ ನಿಗಮ, ಮುಡಾ ಹಗರಣಗಳ ವಿರುದ್ಧ ಯಶಸ್ವಿ ಹೋರಾಟ ನಡೆದಿದ್ದು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗಿದೆ. ಬೆಂಗಳೂರಿನಿಂದ- ಮೈಸೂರು ವರೆಗೆ ಪಕ್ಷ ನಡೆಸಿದ ಪಾದಯಾತ್ರೆಯಲ್ಲಿ ಪಾಲ್ಗೊಳ್ಳದೇ ಸರ್ಕಾರದ ಜತೆಕೈಜೋಡಿಸಿದವರೇ ಇಂದು ಜನಜಾಗೃತಿ ಅಭಿಯಾನ ನಡೆಸಲು ಹೊರಟಿರುವುದರ ಉದ್ದೇಶವಾದರೂ ಏನು ಎಂಬುದನ್ನು ಯತ್ನಾಳ್ ಸ್ಪಷ್ಟಪಡಿಸಬೇಕು’ ಎಂದು ರೇಣುಕಾಚಾರ್ಯ ಸವಾಲು ಹಾಕಿದರು.

[pj-news-ticker]