Breaking
Tue. Oct 8th, 2024

ಸಾಗರ : ʼಅಡಿಕೆಗೆ ಬಣ್ಣ ಹಾಕಿ, ಕಲಬೆರಕೆಗೊಳಿಸಿ ಮಾರುಕಟ್ಟೆಗೆ ಬಿಡುವವರ ಮೇಲೆ ಕ್ರಮವಹಿಸಿʼ

By Mooka Nayaka News Sep 17, 2024
Spread the love

ಸಾಗರ: ಅಡಿಕೆ ಮಾರುಕಟ್ಟೆಯಲ್ಲಿ ಕಳಪೆ ಹಾಗೂ ಕಲಬೆರಕೆ ಅಡಕೆ ಬರುತ್ತಿದ್ದು, ಮಲೆನಾಡಿನ ಗುಣಮಟ್ಟದ ಅಡಿಕೆ ತನ್ನ ಬೆಲೆ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದ್ದು, ತಕ್ಷಣ ಕಲಬೆರಕೆ ಅಡಿಕೆ ಮಾರಾಟಗಾರರ ಮತ್ತು ಮಿಶ್ರಣ ಮಾಡಿ ಅಡಿಕೆ ಗುಣಮಟ್ಟ ಹಾಳು ಮಾಡುತ್ತಿರುವವರ ವಿರುದ್ಧ ಕ್ರಮ ಜರುಗಿಸಲು ಒತ್ತಾಯಿಸಿ ಸಾಗರ ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದ ವತಿಯಿಂದ ಎಪಿಎಂಸಿ ಕಾರ್ಯದರ್ಶಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.

ಕ್ರಮವಾಗದಿದ್ದರೆ ಸಂಘದಿಂದ ಪ್ರತಿಭಟನೆ:
ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ವ.ಶಂ.ರಾಮಚಂದ್ರ ಭಟ್, ಮಲೆನಾಡು ಭಾಗದಲ್ಲಿ ಸಾಂಪ್ರದಾಯಿಕ ಅಡಿಕೆ ಬೆಳೆಗಾರರಿದ್ದು, ಗುಣಮಟ್ಟದ ಅಡಿಕೆ ಮಾರುಕಟ್ಟೆಗೆ ತರುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅಡಿಕೆಗೆ ಕಲಬೆರಕೆ ಹಾಗೂ ಕಳಪೆ ಅಡಿಕೆ ಮಾರುಕಟ್ಟೆಗೆ ವ್ಯಾಪಕವಾಗಿ ಪ್ರವೇಶವಾಗುತ್ತಿದೆ. ಕೆಲವು ಮಧ್ಯವರ್ತಿಗಳು ಅಡಿಕೆ ಕಲಬೆರೆಕೆ ಮೂಲಕ ಅಡಿಕೆಗೆ ಕೆಟ್ಟ ಹೆಸರು ತರುತ್ತಿದ್ದಾರೆ. ಅಡಿಕೆಗೆ ಬಣ್ಣ ಹಾಕಿ ಉತ್ತಮ ಅಡಿಕೆ ಜೊತೆ ಸೇರಿಸಿ ಮಾರುಕಟ್ಟೆಗೆ ಬಿಡುತ್ತಿದ್ದಾರೆ. ಇದರಿಂದ ಅಡಿಕೆ ಸೇವನೆ ಮಾಡುವವರ ಆರೋಗ್ಯವೂ ಹದಗೆಡುತ್ತಿದೆ. ಯಾರು ಕಲಬೆರಕೆ ಮಾಡುತ್ತಿದ್ದಾರೋ ಅವರನ್ನು ಬಂಧಿಸಿ. ಮುಂದಿನ 10-15  ದಿನಗಳಲ್ಲಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳದಿದ್ದಲ್ಲಿ ಬೆಳೆಗಾರರ ಸಂಘ ಪ್ರತಿಭಟನೆ ಹಮ್ಮಿಕೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿದರು.

ಅಡಿಕೆ ಮಾರುಕಟ್ಟೆ ಮೇಲೆ ಗಂಭೀರ ಪರಿಣಾಮ:
ಎಪಿಎಂಸಿ ಮಾಜಿ ಅಧ್ಯಕ್ಷ ಚೇತನರಾಜ್ ಕಣ್ಣೂರು ಮಾತನಾಡಿ, ಅಡಿಕೆ ಬೆಳೆಗಾರರ ರಕ್ಷಿಸುವುದು ನಮ್ಮ ಕರ್ತವ್ಯ. ಅಡಿಕೆ ಕಲಬೆರೆಕೆಯಿಂದ ಬೆಳೆಗಾರರ ಹೆಸರು ಹಾಳಾಗುವ ಜೊತೆಗೆ ಅಡಿಕೆ ಗುಣಮಟ್ಟ ಕೆಡುತ್ತಿದೆ. ಕೆಲವು ಮಧ್ಯವರ್ತಿಗಳ  ಕೃತ್ಯದಿಂದಾಗಿ ಅಡಿಕೆ ಮಾರುಕಟ್ಟೆ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ತಕ್ಷಣ ಅಧಿಕಾರಿಗಳು ಅಡಿಕೆಗೆ ಬಣ್ಣ ಮಿಶ್ರಣ ಮಾಡುವವರು ಮತ್ತು ಕಳಪೆ ಅಡಿಕೆ ಮಿಶ್ರಣ ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಮುಲಾಜಿಲ್ಲದೆ ಕ್ರಮ: ಎಪಿಎಂಸಿ ಕಾರ್ಯದರ್ಶಿ 
ಮನವಿ ಸ್ವೀಕರಿಸಿ ಮಾತನಾಡಿದ ಎಪಿಎಂಸಿ ಕಾರ್ಯದರ್ಶಿ ನಿಜಲಿಂಗಪ್ಪ ತೋಟದ್, ಅಡಿಕೆಗೆ ಬಣ್ಣ ಮಿಶ್ರಣ ಮತ್ತು ಕಳಪೆ ಅಡಕೆ ಬೆರೆಸುವವರ ಬಗ್ಗೆ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಲಾಗುವುದು. ಅಂತಹ ಪ್ರಕರಣ ಕಂಡು ಬಂದಲ್ಲಿ ಕಾನೂನಿನ ಪ್ರಕಾರ ಕ್ರಮ  ಕೈಗೊಳ್ಳಲಾಗುವುದು. ಅಡಕೆ ಕಳಪೆ ಬಗ್ಗೆ ಮಾಹಿತಿ ಇದ್ದವರು 9008063378ಗೆ ಕರೆ ಮಾಡಲು ತಿಳಿಸಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಆರ್.ಎಸ್.ಗಿರಿ, ಹಿರಿಯ ಸಹಕಾರಿ ಯು.ಎಚ್.ರಾಮಪ್ಪ ಮಾತನಾಡಿದರು. ಮನವಿ ಸಲ್ಲಿಕೆ ಸಂದರ್ಭದಲ್ಲಿ ರವಿಕುಮಾರ್ ಎಚ್.ಎಂ., ಅಡಿಕೆ ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಖಂಡಿಕಾ, ಭೀಮನಕೋಣೆ ಪ್ಯಾಕ್ಸ್ ಅಧ್ಯಕ್ಷ ರಾಜೇಶ್ ಕೆ.ಕೆ., ವರುಣ ಹೆಗಡೆ, ವೆಂಕಟಗಿರಿ ಕುಗ್ವೆ, ವೆಂಕಟೇಶ್, ನಾಗಾನಂದ, ರಾಜಶೇಖರ ಹಂದಿಗೋಡು ಇನ್ನಿತರರಿದ್ದರು.

Related Post