ಮುಂಬಯಿ: ಬಾಲಿವುಡ್ ಸೂಪರ್ ಹಿಟ್ ಫ್ರ್ಯಾಂಚೈಸ್ ಗಳಲ್ಲಿ ಒಂದಾಗಿರುವ ʼಧೂಮ್ʼ ಚಿತ್ರದ 4ನೇ ಭಾಗದ ಬಗ್ಗೆ ಕಳೆದ ಕೆಲ ಸಮಯದಿಂದ ಚರ್ಚೆ ನಡೆಯುತ್ತಿದೆ.
ಯಶ್ ರಾಜ್ ಫಿಲ್ಮ್ಸ್ ನಿರ್ಮಾಣದ ಬಿಗ್ ಬಜೆಟ್ ʼಧೂಮ್-4ʼ ಸೆಟ್ಟೇರಲು ತೆರೆಮರೆಯಲ್ಲಿ ಸಿದ್ಧತೆಗಳು ನಡೆಯುತ್ತಿದೆ. ನಿರ್ಮಾಪಕ ಆದಿತ್ಯ ಚೋಪ್ರಾ, ಅಯನ್ ಮುಖರ್ಜಿ, ವಿಜಯ್ ಕೃಷ್ಣ ಆಚಾರ್ಯ ಮತ್ತು ಶ್ರೀಧರ್ ರಾಘವನ್ ಅವರೊಂದಿಗೆ ಸೇರಿಕೊಂಡು ಸಿನಿಮಾದ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ ಎನ್ನಲಾಗಿದೆ.
ಇತ್ತೀಚೆಗಷ್ಟೇ ʼಧೂಮ್ʼ ತೆರೆಕಂಡು 20 ವರ್ಷ ಆಗಿದೆ. ಈ ಸಂದರ್ಭದಲ್ಲಿ ನಿರ್ಮಾಣ ಸಂಸ್ಥೆ ಸ್ಪೆಷೆಲ್ ಪೋಸ್ಟರ್ ಹಂಚಿಕೊಂಡಿತ್ತು.
ʼಧೂಮ್-4ʼ ಗಾಗಿ ಚಿತ್ರ ತಂಡ ಕಾಲಿವುಡ್ ಸ್ಟಾರ್ ನಟ ಸೂರ್ಯ ಅವರ ಬಳಿ ಮಾತುಕತೆ ನಡೆಸಿದ್ದು, ವಿಲನ್ ಪಾತ್ರಕ್ಕಾಗಿ ಅವರನ್ನು ಕೇಳಿಕೊಂಡಿದೆ ಎಂದು ವರದಿಯಾಗಿದೆ.
ಆರಂಭಿಕ ಹಂತದಲ್ಲಿ ಈ ಮಾತುಕತೆ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಈ ಸ್ಪಷ್ಟನೆ ಸಿಗಲಿದೆ ಎನ್ನಲಾಗಿದೆ. ಈ ಹಿಂದೆ ಸೂರ್ಯ ʼವಿಕ್ರಮ್ʼ ಸಿನಿಮಾದಲ್ಲಿ ʼ ರೋಲೆಕ್ಸ್ʼ ಎನ್ನುವ ನೆಗೆಟಿವ್ ಪಾತ್ರಕ್ಕೆ ಬಣ್ಣ ಹಚ್ಚಿದ್ದರು.
ಸೂರ್ಯ ಸದ್ಯ ʼಕಂಗುವʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.