ಬೆಂಗಳೂರು: ಮಹಾತ್ಮಾ ಗಾಂಧಿಯವರ ನಾಯಕತ್ವದಲ್ಲಿ ಈ ದೇಶದಲ್ಲಿ ಅನೇಕರು ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ, ಬಲಿದಾನಗಳನ್ನು ಮಾಡಿದ್ದಾರೆ. ಆಸ್ತಿಪಾಸ್ತಿಗಳನ್ನು ಕಳೆದುಕೊಂಡಿದ್ದಾರೆ. ಅವರೆಲ್ಲರ ತ್ಯಾಗ, ಹೋರಾಟದಿಂದ ನಾವು ಇಂದು ಸ್ವತಂತ್ರರಾಗಿದ್ದೇವೆ. ನಮ್ಮನ್ನು ನಾವೇ ಆಳಿಕೊಂಡು ಹೋಗುವ ವ್ಯವಸ್ಥೆಯನ್ನು ಮಾಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಮಹಾತ್ಮಾ ಗಾಂಧಿಯವರನ್ನು ಸ್ಮರಿಸಿಕೊಂಡರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ವಿಧಾನಸೌಧ ಆವರಣದಲ್ಲಿರುವ ಮಹಾತ್ಮಾ ಗಾಂಧಿ ಪ್ರತಿಮೆಯ ಬಳಿ ಹುತಾತ್ಮರ ದಿನಾಚರಣೆಯ ಅಂಗವಾಗಿ ಭಾವಚಿತ್ರಕ್ಕೆ ಮಾಲಾರ್ಪಣೆ ನೆರವೇರಿಸಿ, ಮೌನಾಚರಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಶ್ರೀರಾಮ ಚಂದ್ರ ದಶರಥ ಮಹಾರಾಜ ಮತ್ತು ಕೌಸಲ್ಯಾ ದೇವಿಯ ಮಗ. ಶ್ರೀರಾಮಚಂದ್ರ ಪಿತೃವಾಕ್ಯ ಪರಿಪಾಲನೆಗೆ ಭರತನಿಗೆ ಪಟ್ಟ ಕಟ್ಟಿ ತಾನು ಸಿಂಹಾಸನ ತ್ಯಾಗ ಮಾಡಿ ಕಾಡಿಗೆ ಹೋಗ್ತಾರೆ. ಶ್ರೀರಾಮನ ಜೊತೆ ಸೀತೆ, ಲಕ್ಷ್ಮಣ ಕೂಡ ಹೋಗುತ್ತಾರೆ. 14 ವರ್ಷಗಳ ಕಾಲ ವನವಾಸ ಅನುಭವಿಸುತ್ತಾರೆ. ಶ್ರೀರಾಮಚಂದ್ರ ಎಂದರೆ ಸತ್ಯಪರಿಪಾಲನೆ ಮಾಡುವವರು, ವನವಾಸ ಮುಗಿಸಿ ಅಯೋಧ್ಯೆಗೆ ಬಂದ ನಂತರ ರಾಜನಾಗಿ ಅಧಿಕಾರ ಸ್ವೀಕರಿಸಿ ಆಡಳಿತ ನಡೆಸುತ್ತಾರೆ. ಎಲ್ಲಾ ಧರ್ಮ, ಜಾತಿಯವರನ್ನು ಸಮಾನವಾಗಿ ಶ್ರೀರಾಮಚಂದ್ರ ಕಂಡು ನ್ಯಾಯ ಒದಗಿಸಿಕೊಡುತ್ತಿದ್ದರು. ಅದಕ್ಕಾಗಿ ಇಂದು ನಾವು ರಾಮರಾಜ್ಯವಾಗಬೇಕೆಂದು ಹೇಳುತ್ತೇವೆ. ಅಷ್ಟರ ಮಟ್ಟಿಗೆ ಆದರ್ಶ ಆಡಳಿತವನ್ನು ಶ್ರೀರಾಮಚಂದ್ರ ಕೊಟ್ಟಿದ್ದರು.
ಮಂಡ್ಯ ಜಿಲ್ಲೆಯ ಕೆರೆಗೋಡುವಿನಲ್ಲಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಅಲ್ಲಿ ರಾಷ್ಟ್ರಧ್ವಜ ಅಥವಾ ಕನ್ನಡ ಧ್ವಜ ಹಾರಿಸಲು ಜಿಲ್ಲಾಡಳಿತ ಅನುಮತಿ ನೀಡಿ ಅದಕ್ಕೆ ಮುಚ್ಚಳಿಕೆ ಸಹ ಬರೆದುಕೊಡಲಾಗಿತ್ತು. ಯಾವುದೇ ಧರ್ಮದ. ಪಕ್ಷದ ಬಾವುಟ ಹಾರಿಸಬಾರದು ಎಂದು ಸಹ ಷರತ್ತು ವಿಧಿಸಿದ್ದರು. ಆದರೆ ಅದಕ್ಕೆ ವಿರುದ್ಧವಾಗಿ ನಡೆದುಕೊಂಡು ಹನುಮ ಧ್ವಜ ಹಾರಿಸಿದರು, ಅಂದರೆ ಅದರ ಅರ್ಥ ರಾಜಕೀಯ ಲಾಭಗೊಳಿಸಬೇಕೆಂಬುದಲ್ಲವೇ, ರಾಜಕೀಯ ಲಾಭಕ್ಕಾಗಿ, ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಪ್ರಯತ್ನ ಎಂದು ಸಿದ್ದರಾಮಯ್ಯ ಕಿಡಿಕಾರಿದರು.
ಮಹಾತ್ಮಾ ಗಾಂಧಿಯವರು ಸಾಯುವಾಗ ಹೇ ರಾಮ್ ಎಂದು ಉಚ್ಚಾರ ಮಾಡಿಯೇ ಉಸಿರು ಬಿಟ್ಟರು. ಶ್ರೀರಾಮ ದೇವರ ಬಗ್ಗೆ ಅಪಾರ ಭಕ್ತಿ, ನಂಬಿಕೆಯನ್ನು ಇಟ್ಟುಕೊಂಡಿದ್ದರು. ಅದಕ್ಕೋಸ್ಕರ ಅವರು ರಘುಪತಿ ರಾಘವ ರಾಜಾರಾಮ್, ಪತೀತ ಪಾವನ ಸೀತಾರಾಮ್ ಎಂದು ಹೇಳುತ್ತಿದ್ದರು. ನಾವು ಕೂಡ ಎಲ್ಲಾ ಕಾರ್ಯಕ್ರಮಗಳಲ್ಲಿ ಶ್ರೀರಾಮನನ್ನು ಭಕ್ತಿಯಿಂದ ಸ್ಮರಿಸುತ್ತೇವೆ ಎಂದರು.
ಶಾಂತಿ ಕದಡುವ ಕೆಲಸ: ಗೋಡ್ಸೆ ಅವರ ವಂಶಸ್ಥರು, ಅನುಯಾಯಿಗಳು ಇಂದು ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ. ಸಮಾಜದಲ್ಲಿ ಶಾಂತಿ ನೆಲೆಸಬೇಕಾದರೆ ಎಲ್ಲರೂ ಕೂಡ ಮನುಷ್ಯರಾಗಿ ಪರಸ್ಪರ ಪ್ರೀತಿ, ವಿಶ್ವಾಸದಿಂದ ಬಾಳಬೇಕು. ಮನುಷ್ಯ-ಮನುಷ್ಯರ ಮಧ್ಯೆ, ಧರ್ಮಗಳ ನಡುವೆ ಬೆಂಕಿ ಹಚ್ಚುವ ಕೆಲಸವಾಗಬಾರದು. ಫೆಬ್ರವರಿ 9ರಂದು ಮಂಡ್ಯ ಬಂದ್ ಗೆ ಕರೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಅದರ ಬಗ್ಗೆ ಜನ ತೀರ್ಮಾನ ಮಾಡುತ್ತಾರೆ. ಅಲ್ಲಿ ರಾಷ್ಟ್ರಧ್ವಜ ಹಾರಿಸಬೇಕಾಗಿತ್ತು. ಬರೆದುಕೊಟ್ಟಿದ್ದ ಮುಚ್ಚಳಿಕೆ ಉಲ್ಲಂಘನೆ ಮಾಡಿ ಭಗವಾ ಧ್ವಜ ಹಾರಿಸಿದರೆ ಅದು ಸರಿಯೇ, ಆ ಜಾಗದಲ್ಲಿ ರಾಷ್ಟ್ರಧ್ವಜ ಹಾರಿಸಿದ್ದಾರೆ ಅಷ್ಟೆ ಎಂದರು.