ದೆಹಲಿ: ಮದರಸಾದಲ್ಲಿ ಕಲಿಯುತ್ತಿದ್ದ 5 ವರ್ಷದ ಬಾಲಕನೊಬ್ಬ ಅನುಮನಾಸ್ಪದ ರೀತಿ ಸಾವನಪ್ಪಿದ್ದ ಘಟನೆಗೆ ಸಂಬಂಧಿಸಿದಂತೆ ಕೃತ್ಯದ ಹಿಂದಿನ ಅಸಲಿಯತ್ತು ತನಿಖೆಯಲ್ಲಿ ಬಯಲಾಗಿದೆ.
ಏನಿದು ಘಟನೆ?: ಶುಕ್ರವಾರ (ಆ.23ರಂದು) ರಾತ್ರಿ 10 ಗಂಟೆ ಸುಮಾರಿಗೆ ಈಶಾನ್ಯ ದೆಹಲಿಯ ದೈಲಾಪುರ ಪ್ರದೇಶದಲ್ಲಿರುವ ತಲೀಮುಲ್ ಖುರಾನ್ ಮದರಸಾದಿಂದ 5 ವರ್ಷದ ಬಾಲಕನ ತಾಯಿಗೆ ಕರೆ ಮಾಡಿ ನಿಮ್ಮ ಮಗನಿಗೆ ಹುಷಾರ್ ಇಲ್ಲವೆಂದು ಹೇಳಲಾಗಿದೆ. ಕೂಡಲೇ ತಾಯಿ ಮದರಸಾದ ಬಳಿ ಬಂದು ಮಗನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಬಾಲಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಮಗನ ಕುತ್ತಿಗೆ, ಬೆನ್ನು ಮತ್ತು ಸೊಂಟದ ಹಾಗೂ ತೊಡೆಸಂದುಗಳಲ್ಲಿ ಗಾಯಗಳಿತ್ತು. ಇದನ್ನು ನೋಡಿ ಅನುಮಾನಗೊಂಡ ತಾಯಿ ಮಗನ ಮೃತದೇಹವನ್ನು ಮದರಸಾಕ್ಕೆ ತಂದು ಅಲ್ಲಿನ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ಹೊರಹಾಕಿ ಪೊಲೀಸರಿಗೆ ಕರೆ ಮಾಡಿದ್ದಾರೆ.
ಮರಣೋತ್ತರ ಪರೀಕ್ಷೆಯ ಬಳಿಕ ಬಾಲಕ ಅನಾರೋಗ್ಯದಿಂದ ಮೃತಪಟ್ಟಿರುವುದು ಅಲ್ಲವೆನ್ನುವುದು ಗೊತ್ತಾಗಿದೆ. ವಿದ್ಯಾರ್ಥಿಗೆ ಹಲ್ಲೆಗೈದ ಪರಿಣಾಮ ಗಂಭೀರವಾಗಿ ದೇಹದೊಳಗೆ ಗಾಯಗಳಾಗಿದೆ. ಇದರಿಂದ ವಿದ್ಯಾರ್ಥಿ ಮೃತಪಟ್ಟಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ.
ಮರಣೋತ್ತರ ಪರೀಕ್ಷೆಯ ವರದಿಯ ಬಳಿಕ ದೆಹಲಿ ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಪ್ರಾರಂಭಿಸಿದ್ದಾರೆ.
ಪೊಲೀಸರು ಮದರಸಾದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ವಿದ್ಯಾರ್ಥಿಯ ಸ್ನೇಹಿತರು ಮತ್ತು ಇತರ ವಿದ್ಯಾರ್ಥಿಗಳೊಂದಿಗೆ ಮಾಹಿತಿಯನ್ನು ಕೇಳಿದ್ದಾರೆ. ಅನುಮಾನಗೊಂಡ ಪೊಲೀಸರು ಮೂವರು ಬಾಲಕರನ್ನು ಪ್ರತ್ಯೇಕವಾಗಿ ವಿಚಾರಣೆಗೆ ಒಳಪಡಿಸಿದಾಗ 11 ವರ್ಷದ ಮತ್ತು 9 ವರ್ಷದ ಮೂವರು ಬಾಲಕರು ಅಪರಾಧವೆಸಗಿರುವುದಾಗಿ ತಪ್ಪೋಪ್ಪಿಕೊಂಡಿದ್ದಾರೆ.
ಕೊಲೆ ಮಾಡಿದ್ದು ಯಾಕೆ?: ಮೂವರು ಬಾಲಕರು ರಜೆ ಪಡೆದು ಮನೆಗೆ ಭೇಟಿ ನೀಡಲು ಬಯಸಿದ್ದರು. ಹೀಗಾಗಿ ತಮ್ಮನ್ನು ಹೆಸೆರಿಟ್ಟು ಕರೆಯುತ್ತಿದ್ದ ನಿರ್ದಿಷ್ಟ ಬಾಲಕನನ್ನು ಗುರಿಯಾಗಿಸಿಕೊಂಡು ಈ ಕೃತ್ಯವನ್ನುವೆಸಗಿರುವುದಾಗಿ ವಿಚಾರಣೆಯಲ್ಲಿ ಹೇಳಿದ್ದಾರೆ.
ಕೃತ್ಯಕ್ಕೆ ನೆರವಾದ ಕ್ರೈಮ್ ಶೋ: ಕ್ರೈಮ್ ಶೋವೊಂದನ್ನು ನೋಡಿದ ಮೂವರು ಬಾಲಕನನ್ನು ಹತ್ಯೆಗೈಯುವ ಯೋಜನೆಯನ್ನು ಹಾಕಿಕೊಂಡಿದ್ದರು. ಕ್ರೈಮ್ ಶೋ ನೋಡಿ ಪ್ರೇರಣೆಗೊಂಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಸದ್ಯ ಮದರಸಾಕ್ಕೆ ಬೀಗ ಹಾಕಲಾಗಿದ್ದು, ಎಲ್ಲ ಮಕ್ಕಳನ್ನು ಮನೆಗೆ ಕಳುಹಿಸಲಾಗಿದೆ. ಪೊಲೀಸರು ಬಾಲನ್ಯಾಯ ಮಂಡಳಿಯ ಕಾನೂನು ಪ್ರಕಾರ ಪ್ರಕರಣವನ್ನು ಕೈಗೆತ್ತಿಕೊಂಡಿದ್ದಾರೆ.