ಬೆಂಗಳೂರು: ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಘೋಷಿಸಿದ್ದ 5 ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತಂದಿರುವ ಸಿಎಂ ಸಿದ್ದರಾಮಯ್ಯ, ಈ ಯೋಜನೆಗಳಿಗೆ ಹಣ ಹೊಂದಿಸಲು ಭಾರೀ ಕಸರತ್ತು ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ತಮ್ಮ 14ನೇ ಬಜೆಟ್ ಮಂಡನೆ ಬೆನ್ನಲ್ಲೇ ಅಬಕಾರಿ ತೆರಿಗೆ ಹೆಚ್ಚಳವಾಗಿದೆ.
ಅಬಕಾರಿ ತೆರಿಗೆ ಶೇಕಡಾ 20ರಷ್ಟು ಹೆಚ್ಚಳವಾಗಿದೆ. ಇದರಿಂದ ವಿವಿಧ ಬ್ರ್ಯಾಂಡ್ಗಳ ಮದ್ಯ ಬೆಲೆ ಹೆಚ್ಚಳವಾಗಲಿದೆ. ಬಿಯರ್ ಮೇಲಿನ ಅಬಕಾರಿ ಸುಂಕ ಶೇಕಡಾ 10ರಷ್ಟು ಹೆಚ್ಚಿಸಲಾಗಿದೆ.
ಮದ್ಯದ ಎಲ್ಲಾ 18 ಘೋಷಿತ ಬೆಲೆ ಸ್ಲಾಬ್‌ಗಳ ಮೇಲಿನ ಹೆಚ್ಚುವರಿ ಅಬಕಾರಿ ಸುಂಕದ ದರಗಳನ್ನು ಅನುಬಂಧ (ಅ) ರಲ್ಲಿರುವಂತೆ ಹಾಲಿ ಇರುವ ದರಗಳ ಮೇಲೆ ಶೇ.20ರಷ್ಟು ಹೆಚ್ಚಿಸಲು ಪ್ರಸ್ತಾಪಿಸುತ್ತೇನೆ. ಹಾಗೆಯೇ ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ.175 ರಿಂದ ಶೇ.185ಕ್ಕೆ ಹೆಚ್ಚಿಸಲಾಗಿದೆ.
ಅಬಕಾರಿ ಸುಂಕದ ದರಗಳ ಹೆಚ್ಚಳದ ನಂತರವೂ ನಮ್ಮ ರಾಜ್ಯದಲ್ಲಿ ಮದ್ಯದ ದರವು ನೆರೆ ರಾಜ್ಯಗಳಿಗಿಂತ ಕಡಿಮೆ ಇರುತ್ತದೆ. ಇದರೊಂದಿಗೆ, ಹೆಚ್ಚು ಪರಿಣಾಮಕಾರಿಯಾದ ಜಾರಿ ಮತ್ತು ನಿಯಂತ್ರಣಾ ಕ್ರಮಗಳ ಮೂಲಕ 2023-24ನೇ ಸಾಲಿನಲ್ಲಿ ಅಬಕಾರಿ ಇಲಾಖೆಗೆ 36,000 ಕೋಟಿ ರೂ.ಗಳ ರಾಜಸ್ವ ಸಂಗ್ರಹಣೆ ಗುರಿಯನ್ನು ನಿಗದಿಪಡಿಸಲಾಗಿದೆ ಎಂದು ಸಿದ್ದರಾಮಯ್ಯ ಅವರು ತಮ್ಮ ಬಜೆಟ್ನಲ್ಲಿ ತಿಳಿಸಿದರು.