Breaking
Sun. Sep 8th, 2024

ಬಾಂಗ್ಲಾದೇಶದಲ್ಲಿ ಮಿತಿಮೀರಿದ ಹಿಂಸಾಚಾರ: ಹಿಂದೂಗಳ ಮನೆಗೆ ಬೆಂಕಿ, ಮಹಿಳೆಯರ ಕಿಡ್ನಾಪ್

By Mooka Nayaka News Aug 6, 2024
Spread the love

ಢಾಕಾ: ಪ್ರಧಾನಿ ಹುದ್ದೆಯಿಂದ ಪದಚ್ಯುತಗೊಂಡ ಶೇಖ್‌ ಹಸೀನಾ ಬಾಂಗ್ಲಾದೇಶವನ್ನು ತೊರೆದ ಬಳಿಕ ರಾಜಕೀಯ ಬಿಕ್ಕಟ್ಟಿನ ಸಂದರ್ಭದ ಅವಕಾಶವನ್ನು ಬಳಸಿಕೊಂಡ ಪ್ರತಿಭಟನಾಕಾರರು ಹಿಂದೂ ಸಮುದಾಯವನ್ನು ಗುರಿಯಾಗಿರಿಸಿಕೊಂಡು ಹಿಂಸಾಚಾರ ನಡೆಸಿರುವ ಘಟನೆ ವರದಿಯಾಗಿದೆ.

ಹಲವು ಮಾಧ್ಯಮ ವರದಿಗಳ ಪ್ರಕಾರ, ಬಾಂಗ್ಲಾದೇಶದಾದ್ಯಂತ ಇಸ್ಲಾಮ್‌ ಉಗ್ರವಾದಿ ಗುಂಪುಗಳು, ಪ್ರತಿಭಟನಾಕಾರರು ಹಿಂದೂ ದೇವಾಲಯಗಳನ್ನು ಧ್ವಂಸಗೊಳಿಸಿ, ಹಿಂದೂಗಳ ಮನೆಗಳನ್ನು ಲೂಟಿ ಮಾಡಿರುವುದಾಗಿ ವಿವರಿಸಿದೆ.

ಬಾಂಗ್ಲಾದಲ್ಲಿನ ಅರಾಜಕತೆಯನ್ನು ಬಳಸಿಕೊಂಡ ಇಸ್ಲಾಮ್‌ ತೀವ್ರವಾದಿಗಳು ಅಲ್ಪಸಂಖ್ಯಾತ ಹಿಂದೂ ಸಮುದಾಯದ ಮೇಲೆ ದಾಳಿ ನಡೆಸಿದ್ದು, 1964ರಿಂದ 2013ರವರೆಗೆ ಬಾಂಗ್ಲಾದೇಶದಿಂದ ಅಂದಾಜು 11 ಲಕ್ಷ ಹಿಂದೂಗಳು ವಲಸೆ ಹೋಗಿದ್ದಾರೆ. 1951ಕ್ಕೆ ಹೋಲಿಸಿದರೆ ಪ್ರಸ್ತುತ ಹಿಂದೂಗಳ ಜನಸಂಖ್ಯೆ ಶೇ.14ಕ್ಕೆ ಕುಸಿದಿರುವುದಾಗಿ ವರದಿ ತಿಳಿಸಿದೆ.

ಹಿಂದೂಗಳ ಮೇಲೆ ದಾಳಿ, ಹತ್ಯೆ:

ಸರ್ಕಾರದ ಪರ ಬೆಂಬಲಿಗರು ಮತ್ತು ಬಾಂಗ್ಲಾದೇಶಿ ಪ್ರತಿಭಟನಾಕಾರರ ನಡುವೆ ನಡೆದ ಹಿಂಸಾಚಾರದಲ್ಲಿ ಅವಾಮಿ ಲೀಗ್‌ ಪಕ್ಷದ ಸದಸ್ಯ, ರಂಗ್‌ ಪುರ್‌ ನಗರ ಕಾರ್ಪೋರೇಶನ್‌ ನ ಹಿಂದೂ ಕೌನ್ಸಿಲರ್‌ ಹರ್ಧಾನ್‌ ರಾಯ್‌ ಅವರನ್ನು ಗುಂಡಿಕ್ಕಿ ಹತ್ಯೆಗೈಯಲಾಗಿದೆ. ರಾಯ್‌ ಅವರನ್ನು ಹತ್ಯೆ ಮಾಡಿದ ಬಳಿಕ ಈ ಪ್ರದೇಶದಲ್ಲಿ ಪ್ರಕ್ಷ್ಯುಬ್ಧ ವಾತಾವರಣ ಕಂಡುಬಂದಿರುವುದಾಗಿ ವರದಿ ತಿಳಿಸಿದೆ.

ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ದುಷ್ಕರ್ಮಿಗಳು ಹಿಂಸಾಚಾರದ ವೇಳೆ ಇಸ್ಕಾನ್‌ ದೇವಾಲಯ ಮತ್ತು ಕಾಳಿ ದೇವಾಲಯಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸುತ್ತಿರುವುದಾಗಿ ಹೇಳಿದೆ.

ಹಿಂದೂ ಯುವತಿ, ಮಹಿಳೆಯರನ್ನು ಅಜ್ಞಾನ ಸ್ಥಳಕ್ಕೆ ಕಿಡ್ನಾಪ್‌ ಮಾಡಿ, ಅವರ ಮನೆಗಳನ್ನು ಲೂಟಿ ಮಾಡಿ ಬೆಂಕಿ ಹಚ್ಚಿ ಸುಡುತ್ತಿರುವುದಾಗಿ ವರದಿ ತಿಳಿಸಿದೆ.

ಸ್ವಾತಂತ್ರ್ಯ ಯೋಧರ ಕುಟುಂಬಸ್ಥರಿಗೆ ನೀಡಲಾಗಿರುವ ಶೇ.30ರಷ್ಟು ಮೀಸಲಾತಿಯನ್ನು ವಿರೋಧಿಸಿ ವಿದ್ಯಾರ್ಥಿಗಳು ನಡೆಸುತ್ತಿದ್ದ ಹೋರಾಟ ತೀವ್ರ ಹಿಂಸಾಚಾರಕ್ಕೆ ತಿರುಗಿದ ಪರಿಣಾಮ 300ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದು, ಸಾವಿರಾರು ಮಂದಿ ಗಾಯಗೊಂಡಿದ್ದರು. ಈ ಘಟನೆ ನಂತರ ಶೇಖ್‌ ಹಸೀನಾ ಪ್ರಧಾನಿ ಸ್ಥಾನದಿಂದ ಪದಚ್ಯುತಗೊಂಡು ಭಾರತದಲ್ಲಿ ವಾಸ್ತವ್ಯ ಹೂಡಿದ್ದು, ಬ್ರಿಟನ್‌ ಗೆ ತೆರಳಲು ರಾಜತಾಂತ್ರಿಕ ಅಧಿಕಾರಿಗಳ ಮೂಲಕ ಮಾತುಕತೆ ನಡೆಸುತ್ತಿರುವುದಾಗಿ ವರದಿ ತಿಳಿಸಿದೆ.

Related Post