ಉತ್ತರ ಕನ್ನಡ: ಉತ್ತರ ಕನ್ನಡದ ಬನವಾಸಿಯಲ್ಲಿ ಶಂಕಿತ ಉಗ್ರನೊಬ್ಬನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಬಂಧಿಸಿದೆ. ಬಂಧಿತನನ್ನು ಅಬ್ದುಲ್ ಸುಕ್ಕೂರ್ ಎಂದು ಗುರುತಿಸಲಾಗಿದೆ. ವಿವಿಧ ಉಗ್ರವಾದಿ ಸಂಘಟನೆಗಳ ಜೊತೆಗೆ ನಂಟು ಹೊಂದಿರುವ ಆರೋಪದ ಮೇರೆಗೆ ಅಬ್ದುಲ್ ಸುಕ್ಕೂರ್ ಅವರನ್ನು ವಶಕ್ಕೆ ಪಡೆಯಲಾಗಿದೆ.
ಅಬ್ದುಲ್ ಸುಕ್ಕೂರ್ ಅವರು ಬನವಾಸಿಯ ದಾಸನಕೊಪ್ಪ ಎಂಬ ಹಳ್ಳಿಯ ನಿವಾಸಿ. ಆದರೆ, ಅವರು ಇತ್ತೀಚೆಗೆ ಕೆಲಸದ ನಿಮಿತ್ತ ದುಬೈನಲ್ಲಿ ನೆಲೆಸಿದ್ದರು. ಜೂ. 17ರಂದು ಬಕ್ರೀದ್ ಹಬ್ಬ ಇದ್ದಿದ್ದರಿಂದ ಅವರು ದುಬೈನಿಂದ ತಮ್ಮ ಹಳ್ಳಿಗೆ ಹಿಂದುರಿಗಿದ್ದರು. ಈ ಸಂದರ್ಭದಲ್ಲಿ ಖಚಿತ ಮಾಹಿತಿಯ ಮೇರೆಗೆ, ಅಬ್ದುಲ್ ಮನೆಯ ಮೇಲೆ ದಾಳಿ ನಡೆಸಿದ ಎನ್ಐಎ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದಿದ್ದಾರೆ.
ಉಗ್ರವಾದಿ ಸಂಘಟನೆಗಳ ಜೊತೆಗೆ ನಂಟು ಇಟ್ಟುಕೊಂಡಿದ್ದಷ್ಟೇ ಅಲ್ಲದೆ, ತನ್ನ ಪಾಸ್ ಪೋರ್ಟ್ ಗಾಗಿ ಸರ್ಕಾರಕ್ಕೆ ನಕಲಿ ದಾಖಲೆಗಳನ್ನು ಸಲ್ಲಿಸಿದ ಆರೋಪ ಕೂಡ ಈತನ ಮೇಲಿದೆ. ಹಾಗಾಗಿ, ಅಬ್ದುಲ್ ಸಕ್ಕೂರ್ ನನ್ನು ಬಂಧಿಸಲು ಕಾಯುತ್ತಿದ್ದ ಪೊಲೀಸರು ಬಕ್ರೀದ್ ಗೆ ಆತ ತನ್ನ ಹಳ್ಳಿಗೆ ಮರಳಿರುವುದನ್ನು ತಿಳಿದು ಕೂಡಲೇ ಶಿರಸಿ ಡಿವೈಎಸ್ ಪಿ ಕಚೇರಿಗೆ ಫೋನಾಯಿಸಿದ್ದರು.
ಪೊಲೀಸರ ಸಹಾಯದಿಂದ ಸಕ್ಕೂರ್ ತನ್ನ ಗ್ರಾಮಕ್ಕೆ ಬಂದಿರುವುದನ್ನು ಖಚಿತಪಡಿಸಿಕೊಂಡಿದ್ದ ಅಧಿಕಾರಿಗಳು ತಾವೇ ಖುದ್ದಾಗಿ, ಶಿರಸಿ ಹಾಗೂ ಬನವಾಸಿ ಪೊಲೀಸರ ಸಹಾಯದಿಂದ ಆತನ ಮನೆಗೆ ಹೋಗಿ ಆತನನನ್ನು ವಶಕ್ಕೆ ಪಡೆದಿದ್ದಾರೆ.
ಕಳೆದ ವರ್ಷ ಮಂಗಳೂರಿನಲ್ಲಿ ಕುಕ್ಕರ್ ಬ್ಲಾಸ್ಟ್ ಪ್ರಕರಣ ಸಂಭವಿಸಿತ್ತು. ಇದೇ ವರ್ಷ ಮಾರ್ಚ್ 1ರಂದು ಬೆಂಗಳೂರಿನಲ್ಲಿ ರಾಮೇಶ್ವರಂ ಕೆಫೆ ಎಂಬ ಹೋಟೆಲ್ ನಲ್ಲಿ ಸ್ಫೋಟ ಸಂಭವಿಸಿತ್ತು. ಈ ಎರಡೂ ಪ್ರಕರಣದ ತನಿಖೆಯನ್ನು ಎನ್ಐಎ ನಡೆಸುತ್ತಿದೆ. ಈ ಎರಡೂ ಪ್ರಕರಣಗಳಲ್ಲಿ ಅಬ್ದುಲ್ ಸುಕ್ಕೂರ್ ಅವರ ಪಾತ್ರವಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು ಆ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.