ಕೋಲಾರ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ನಾಯಕರು ತೀವ್ರ ವಾಗ್ದಾಳಿ ನಡೆಸುತ್ತಿದ್ದು, ಪ್ರಧಾನಿ ಮೋದಿ ಅವರನ್ನು ಟೀಕಿಸುವ ಭರದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ನಾಲಿಗೆ ಹರಿಬಿಟ್ಟಿದ್ದಾರೆ.
ಕೋಲಾರದಲ್ಲಿ ಮಾತನಾಡಿರುವ ರಮೇಶ್ ಕುಮಾರ್, ಮೋದಿ ಈ ದೇಶಕ್ಕೆ ಹಿಡಿದಿರುವ ಶನಿ ಎಂದು ಹೇಳಿದ್ದಾರೆ. ಜೂ.04 ಕ್ಕೆ ಈ ದೇಶಕ್ಕೆ ಹಿಡಿದಿರುವ ಶನಿ ಬಿಟ್ಟು ಹೋಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದೇವೆ. ಇಂದಿರಾ ಗಾಂಧಿ ಕೂತಿದ್ದ ಸೀಟಿನಲ್ಲಿ ಬಂದು ಕುಳಿತುಬಿಟ್ಟೆಯಲ್ಲಪ್ಪಾ ಮೋದಿ, ಎಂತಹವರ ಜಾಗಕ್ಕೆ ಎಂತಹವರು ಬಂದು ಕೂತಿದ್ದಾನೆ. ಸಂತೆಯಲ್ಲಿ ಹಾವಾಡಿಗ ಸುಳ್ಳು ಹೇಳೋದು ಕೇಳಿದ್ದೇವೆ. ಪ್ರಧಾನಿ ಸುಳ್ಳು ಹೇಳೋದು ಈ ಪ್ರಪಂಚದಲ್ಲಿಯೇ ಕೇಳಿರಲಿಲ್ಲ ಎಂದು ರಮೇಶ್ ಕುಮಾರ್ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದರು.
ಇದೇ ವೇಳೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ವಿರುದ್ಧವೂ ವಾಗ್ದಾಳಿ ನಡೆಸಿರುವ ರಮೇಶ್ ಕುಮಾರ್, ರೈತನ ಮಗ ಎಂದು ದೇವೇಗೌಡರನ್ನು ಪ್ರಧಾನಿ ಮಾಡಿದ್ದೆವು, ಈಗ ಅವರು ಬಿಜೆಪಿ ಜತೆ ಸೇರಿದ್ದು, ಒಬ್ಬ ಪ್ರಧಾನ ಮಂತ್ರಿಯಾಗಿದ್ದವರು, ಒಬ್ಬ ಮುಖ್ಯಮಂತ್ರಿಯಾಗಿದ್ದವರು ಮೂರು ಸೀಟುಗಳನ್ನ ತೆಗೆದುಕೊಂಡಿದ್ದಾರೆ ಅದರಲ್ಲೂ ಒಂದು ಮಗನಿಗೆ ಇನ್ನೊಂದು ಮೊಮ್ಮಗನಿಗೆ ಎಂದು ವ್ಯಂಗ್ಯವಾಡಿದ್ದಾರೆ.
ಅಳಿಯನನ್ನು ನಿಮ್ಮ ಲೆಕ್ಕದಲ್ಲಿ ಕೊಡಿ ಎಂದು ಅಲ್ಲಿಗೆ ಕಳಿಸಿದರು. ಇವರ ಹಣೆಬರಹಕ್ಕೆ ಅವರ ಬಳಿ ಹೋಗಿ ಸಲಾಂ ಹೊಡೆಯುತ್ತಿದ್ದಾರೆ ಎಂದು ದೇವೇಗೌಡ ವಿರುದ್ಧ ರಮೇಶ್ ಕುಮಾರ್ ಟೀಕಾಪ್ರಹಾರ ನಡೆಸಿದ್ದಾರೆ.