Trending

ಗೆದ್ದಿದ್ದು ಕೇವಲ 25 ಸ್ಥಾನವಾದರೂ ಅತಿ ಹೆಚ್ಚು ವೋಟ್‌ ಪಡೆದಿದ್ದು ಆರ್‌ಜೆಡಿ

Spread the love

ಪಾಟ್ನಾ: ಬಿಹಾರ ವಿಧಾನಸಭೆಯಲ್ಲಿ ಬಿಜೆಪಿ-ಜೆಡಿಯು ಮೈತ್ರಿಯ ಎನ್‌ಡಿಎ ಭರ್ಜರಿ ಬಹುಮತ ಪಡೆದುಕೊಂಡಿದೆ. 243 ಕ್ಷೇತ್ರಗಳ ಬಿಹಾರದಲ್ಲಿ 202 ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ. ಈ ಮೂಲಕ ಮತ್ತೊಮ್ಮೆ ಅಧಿಕಾರ ಹಿಡಿದಿದೆ.

ಈ ಬಾರಿ ಬಿಹಾರದಲ್ಲಿ ಬಿಜೆಪಿ ಕಮಾಲ್‌ ಮಾಡಿದೆ. 101 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದ ಬಿಜೆಪಿ 89 ಸ್ಥಾನಗಳನ್ನು ಗೆದ್ದುಕೊಂಡಿದೆ. ಇಷ್ಟೇ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದ ಜೆಡಿಯು 85 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಆದರೆ ಕಳೆದ ಚುನಾವಣೆಯ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಆರ್‌ಜೆಡಿ ಈ ಬಾರಿ ಕೇವಲ 25 ಕ್ಷೇತ್ರಗಳನ್ನು ಮಾತ್ರ ಗೆದ್ದುಕೊಂಡಿದೆ. ತೇಜಸ್ವಿ ಯಾದವ್‌ ಪಕ್ಷ 145 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿತ್ತು.

ಆರ್‌ಜೆಡಿ ಹೀನಾಯ ಸೋಲು ಕಂಡರೂ ಮತಗಳಿಕೆಯಲ್ಲಿ ಅಗ್ರಸ್ಥಾನದಲ್ಲಿದೆ. ಆರ್‌ಜೆಡಿ ಶೇ.23ರಷ್ಟು ಮತ ಗಳಿಸಿಕೊಂಡಿದೆ. ಉಳಿದಂತೆ ಬಿಜೆಪಿ 20.08ರಷ್ಟು ಮತ ಗಳಿಸಿಕೊಂಡಿದ್ದು ಮತಗಳಿಕೆಯಲ್ಲಿ 2ನೇ ಸ್ಥಾನದಲ್ಲಿದೆ. ಜೆಡಿಯು ಶೇ.19.25ರಷ್ಟು ಮತ ಪಡೆದುಕೊಂಡು ಗಳಿಕೆಯಲ್ಲಿ 3ನೇ ಸ್ಥಾನದಲ್ಲಿದೆ. ಕಾಂಗ್ರೆಸ್‌ ಪಕ್ಷ ಕೇವಲ ಶೇ.8.71ರಷ್ಟು ಮತ ಪಡೆದುಕೊಂಡಿದೆ.

ಕಳೆದ ಬಾರಿಯೂ ಆರ್‌ಜೆಡಿಯೇ ಅತಿಹೆಚ್ಚು ಮತದ ಪಾಲು ಪಡೆದು ಕೊಂಡಿತ್ತು. ಈ ಬಾರಿ ಬಿಜೆಪಿ ಹಾಗೂ ಜೆಡಿಯು ಮತಗಳಿಕೆ ಹೆಚ್ಚಳ ಕಂಡಿದೆ. ಎಲ್‌ಜೆಪಿ ಶೇ.4.98 ಮತ ಪಡೆದುಕೊಂಡಿದೆ. ಶೇ.13.97ರಷ್ಟು ಮತ ಇತರರ ಪಾಲಾಗಿದೆ.

ಆರ್‌ಜೆಡಿ ಮುಂದೆ ಯಾಕೆ?

ಆರ್‌ಜೆಡಿ ಅತಿ ಹೆಚ್ಚು ಮತ ಪಾಲನ್ನು ಪಡೆಯುತ್ತಿದೆ ಎಂದರೆ ಸೋತ ಹೆಚ್ಚಿನ ಕ್ಷೇತ್ರಗಳಲ್ಲಿ ಅದು ಎರಡನೇ ಸ್ಥಾನದಲ್ಲಿರಬಹುದು, ಅಂತಿಮ ಗೆರೆಯನ್ನು ದಾಟಲು ಸಾಕಾಗದಿದ್ದರೂ ಉತ್ತಮ ಪ್ರಮಾಣದ ಮತ ಪಡೆದಿರುತ್ತದೆ. ಇದು ಅವರ ಒಟ್ಟು ಮತ ಪಾಲನ್ನು ಹೆಚ್ಚಿಸುತ್ತದೆ.

ಒಟ್ಟಾರೆಯಾಗಿ ಅವರು ಹೆಚ್ಚಿನ ಮತಗಳನ್ನು ಪಡೆದರೂ ಸಹ, ಅವರು ಗೆಲ್ಲದ, ಕಡಿಮೆ ಅಂತರದಿಂದ ಗೆದ್ದ ಅಥವಾ ಕಡಿಮೆ ಅಂತರದಿಂದ ಸೋತ ಕ್ಷೇತ್ರಗಳಲ್ಲಿ ಆ ಮತಗಳು ವ್ಯರ್ಥವಾಗಿರಬಹುದು ಎಂದು ಇದು ಸೂಚಿಸುತ್ತದೆ.

ವಿರೋಧ ಪಕ್ಷದ ಮಹಾಘಟಬಂಧನ್‌ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ತೇಜಸ್ವಿ ಯಾದವ್ ಕೂಡಾ ತಿಣುಕಾಡಿ ಗೆದ್ದರು. ಎನ್‌ಡಿಎ ಅಭ್ಯರ್ಥಿ ಸತೀಶ್ ಕುಮಾರ್ ವಿರುದ್ಧ ನಡೆದ ನೇರ ಹೋರಾಟದ ನಂತರ ತಮ್ಮ ಕುಟುಂಬದ ಭದ್ರಕೋಟೆಯಾದ ರಾಘೋಪುರ್‌ನಲ್ಲಿ ಗೆಲುವು ಸಾಧಿಸಿದರು.

[pj-news-ticker]