ಶಿವಮೊಗ್ಗ : ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ನಗರಕ್ಕೆ ವಿಮಾನ ಸಂಪರ್ಕ ಕಡಿತಗೊಳ್ಳುವ ಆತಂಕ ಎದುರಾಗಿದೆ. ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಮಾನ ಸೇವೆ ನೀಡುತ್ತಿದ್ದ ಕೊನೆಯ ಸಂಸ್ಥೆ ಸ್ಟಾರ್ ಏರ್ ತನ್ನ ಬುಕಿಂಗ್ ಸ್ಥಗಿತಗೊಳಿಸಿದ್ದು, ನವೆಂಬರ್ 21ರಿಂದ ಕಾರ್ಯಾಚರಣೆ ನಿಲ್ಲಿಸುವ ಸಾಧ್ಯತೆ ಇದೆ.
ಈಗಾಗಲೇ ಮೇ 1ರಿಂದ ಇಂಡಿಗೋ ಹಾಗೂ ಜೂನ್ 9ರಿಂದ ಸ್ಪೈಸ್ಜೆಟ್ ಸಂಸ್ಥೆಗಳು ಶಿವಮೊಗ್ಗ-ಬೆಂಗಳೂರು ಮಾರ್ಗದ ವಿಮಾನ ಸೇವೆಯನ್ನು ಸ್ಥಗಿತಗೊಳಿಸಿವೆ. ಪ್ರಯಾಣಿಕರ ಕೊರತೆ, ಸೂಕ್ತ ಸರ್ಕಾರಿ ಪ್ರೋತ್ಸಾಹದ ಅಭಾವ ಮತ್ತು ಆರ್ಸಿಎಸ್-ಉಡಾನ್ ಯೋಜನೆಯ ಸಬ್ಸಿಡಿ ಅವಧಿ ಮುಕ್ತಾಯವಾಗಿರುವುದು ವಿಮಾನಯಾನ ಸಂಸ್ಥೆಗಳಿಗೆ ಆರ್ಥಿಕ ಹೊರೆಯಾಗಿದೆ ಎನ್ನಲಾಗಿದೆ.
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ 200ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ತಿಂಗಳಿಗೆ ಸುಮಾರು 95 ಲಕ್ಷ ರೂ. ವೇತನ ಹಾಗೂ ನಿರ್ವಹಣಾ ವೆಚ್ಚವಾಗುತ್ತಿದೆ ಎಂದು ವರದಿಯಾಗಿದೆ.
ಸಂಸದ ಬಿ.ವೈ. ರಾಘವೇಂದ್ರ ಭರವಸೆ
ವಿಮಾನ ಸೇವೆ ಸ್ಥಗಿತದ ಕುರಿತು ಪ್ರತಿಕ್ರಿಯಿಸಿರುವ ಸಂಸದ ಬಿ.ವೈ. ರಾಘವೇಂದ್ರ, ಪ್ರಸ್ತುತ ಸೇವೆ ಸ್ಥಗಿತ ತಾತ್ಕಾಲಿಕವಾಗಿದ್ದು, ಕೇಂದ್ರ ಸರ್ಕಾರ ಉಡಾನ್-6 ಯೋಜನೆಗೆ ಸಿದ್ಧತೆ ನಡೆಸುತ್ತಿದೆ. ರಾಜ್ಯ ಸರ್ಕಾರವೂ ಶಿವಮೊಗ್ಗದಿಂದ 10 ಹೊಸ ವಿಮಾನ ಮಾರ್ಗಗಳ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಸಲ್ಲಿಸಿದೆ. ಮುಂದಿನ ಎರಡು ತಿಂಗಳಲ್ಲಿ ವಿಮಾನ ಸೇವೆ ಪುನರಾರಂಭವಾಗುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.
ವಿಮಾನ ಸೇವೆ ಸ್ಥಗಿತಗೊಂಡರೆ ಮಲೆನಾಡಿನ ಪ್ರವಾಸೋದ್ಯಮ, ವ್ಯಾಪಾರ-ವಹಿವಾಟು ಹಾಗೂ ಪ್ರಯಾಣಿಕರಿಗೆ ತೊಂದರೆಯಾಗುವ ಆತಂಕ ವ್ಯಕ್ತವಾಗಿದೆ. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ವಿಮಾನ ನಿಲ್ದಾಣದಲ್ಲಿ ವಿಮಾನ ಸಂಚಾರ ಮುಂದುವರಿಯುವುದೇ ಎಂಬ ಪ್ರಶ್ನೆ ಇದೀಗ ಎದುರಾಗಿದೆ.
