ಆನಂದಪುರ: ಸಮೀಪದ ಗೌತಮಪುರ, ಚನ್ನಾಪುರ ಹಾಗೂ ನಾಡವಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಒಂಟಿ ಸಲಗದ ಸಂಚಾರ ಕಂಡುಬಂದಿದ್ದು, ಗ್ರಾಮಸ್ಥರು ಮತ್ತು ರೈತರು ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ.
ಬೆಳ್ಳಂದೂರು ರಾಜ್ಯ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಗೌತಮಪುರ, ಚನ್ನಾಪುರ ಹಾಗೂ ನಾಡವಳ್ಳಿ ಭಾಗಗಳಲ್ಲಿ ಕಾಡಾನೆಗಳು ಬೀಡುಬಿಟ್ಟಿವೆ. ಈ ಹಿನ್ನೆಲೆಯಲ್ಲಿ ಅಂಬ್ಲಿಗೋಳ ಅರಣ್ಯ ವಲಯದ ಅಧಿಕಾರಿಗಳು ಸುತ್ತಮುತ್ತಲಿನ ಸಾರ್ವಜನಿಕರಿಗೆ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ.
ಸದ್ಯ ಕಾಡಾನೆಗಳು ಪೀರನಕಣಿವೆ ದಾಟಿ ಬೆಳ್ಳಂದೂರು ಕಾಡಿನತ್ತ ತೆರಳಿದ್ದು, ಅರಣ್ಯ ಸಿಬ್ಬಂದಿ ನಿರಂತರ ಪಹರೆ ನಡೆಸುತ್ತಿದ್ದಾರೆ. ಪ್ರತಿವರ್ಷದಂತೆ ಈ ಬಾರಿಯೂ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಕಾಡಾನೆಗಳನ್ನು ಕಾಡಿನತ್ತ ಹಿಮ್ಮೆಟ್ಟಿಸಲು ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ಭದ್ರಾ ಅಭಯಾರಣ್ಯದಿಂದ ಮತ್ತಷ್ಟು ಆನೆಗಳ ಹಿಂಡು ಬರುವ ಸಾಧ್ಯತೆಯೂ ಇದೆ ಎಂದು ಅರಣ್ಯ ಇಲಾಖೆ ಅಂದಾಜಿಸಿದೆ.
ಹಲವು ಗ್ರಾಮಗಳತ್ತ ಆನೆಗಳ ಸಂಚಾರ ಸಾಧ್ಯತೆ
ಅರಣ್ಯ ಇಲಾಖೆಯ ಮಾಹಿತಿಯ ಪ್ರಕಾರ, ಕಾಡಾನೆಗಳು ಮುಂದಿನ ದಿನಗಳಲ್ಲಿ ನಾಡವಳ್ಳಿ, ಚನ್ನಾಪುರ, ಕುಡಿಗೇರಿ ಹಾಗೂ ಬೆಳ್ಳಂದೂರು ಮಾರ್ಗವಾಗಿ ಲಾವಿಗೇರಿ ಮತ್ತು ಹುಲಿಯಪ್ಪನ ಕಣಿವೆಯತ್ತ ಸಾಗುವ ಸಾಧ್ಯತೆಯಿದೆ. ಹೀಗಾಗಿ ಈ ಪ್ರದೇಶಗಳ ಸುತ್ತಮುತ್ತ ವಾಸಿಸುವ ಗ್ರಾಮಸ್ಥರು ಹಾಗೂ ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವ ರೈತರು ಹೆಚ್ಚಿನ ಜಾಗರೂಕತೆ ವಹಿಸುವಂತೆ ಸೂಚಿಸಲಾಗಿದೆ.
ಅರಣ್ಯ ಸಿಬ್ಬಂದಿಯಿಂದ ನಿರಂತರ ಪಹರೆ
ಕಾಡಾನೆಗಳ ಚಲನವಲನದ ಮೇಲೆ ನಿಗಾ ಇರಿಸಲು ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳದಲ್ಲಿ ನಿರಂತರ ಪಹರೆ ನಡೆಸುತ್ತಿದ್ದಾರೆ. ಸಾರ್ವಜನಿಕರು ಕಾಡಾನೆಗಳ ಚಲನವಲನ ಅಥವಾ ಹೆಜ್ಜೆ ಗುರುತುಗಳನ್ನು ಗಮನಿಸಿದರೆ ತಕ್ಷಣವೇ ಸಂಬಂಧಪಟ್ಟ ಅರಣ್ಯ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಕೋರಲಾಗಿದೆ.
ಕಾಡಾನೆಗಳು ಸಂಚರಿಸುವ ಪ್ರದೇಶಗಳಲ್ಲಿ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು. ಆನೆಗಳು ಕಂಡುಬಂದಲ್ಲಿ ಅವುಗಳ ಸಮೀಪಕ್ಕೆ ತೆರಳದೆ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು ಎಂದು ಅರಣ್ಯ ಇಲಾಖೆ ಮನವಿ ಮಾಡಿದೆ.
