ನವದೆಹಲಿ : ದೀಪಾವಳಿ ಹಬ್ಬದ ಸಮೀಪದಲ್ಲೇ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಕೇಂದ್ರ ಸಚಿವ ಸಂಪುಟವು ಭರ್ಜರಿ ಸಿಹಿಸುದ್ದಿ ನೀಡಿದೆ.
2026ರ ಜುಲೈನಿಂದ ಆರಂಭವಾಗಿ ಆರು ತಿಂಗಳ ಅವಧಿಗೆ ಅನ್ವಯವಾಗುವಂತೆ ತುಟ್ಟಿಭತ್ಯೆಯಲ್ಲಿ (DA- Dearness Allowance) ಶೇ. 3ರಷ್ಟು ಹೆಚ್ಚಳ ಮಾಡಲು ಸಂಪುಟ ಸಭೆ ಅನುಮೋದನೆ ನೀಡಿದೆ.
ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಕ್ಯಾಬಿನೆಟ್ ಸಭೆ ಬಳಿಕ ತುಟ್ಟಿಭತ್ಯೆ ಏರಿಕೆಯಾಗಿರುವ ನಿರ್ಧಾರವನ್ನು ಘೋಷಿಸಿದರು.
ಕೇಂದ್ರ ಸರ್ಕಾರದ ಈ ಹೊಸ ನಿರ್ಧಾರದಿಂದಾಗಿ ನೌಕರರ ತುಟ್ಟಿಭತ್ಯೆಯು ಮೂಲ ವೇತನದ ಶೇ. 60ರಿಂದ ಶೇ. 63ಕ್ಕೆ ಏರಿಕೆಯಾಗಿದೆ. ಇದೇ ರೀತಿ ಪಿಂಚಣಿದಾರರಿಗೆ ನೀಡಲಾಗುವ ತುಟ್ಟಿ ಪರಿಹಾರದಲ್ಲೂ ಅನುರೂಪವಾದ ಹೆಚ್ಚಳವಾಗಲಿದೆ.
ಈ ತುಟ್ಟಿಭತ್ಯೆ ಏರಿಕೆಯಿಂದ ಸರ್ಕಾರಕ್ಕೆ ಹೆಚ್ಚುವರಿಯಾಗಿ 10,016 ಕೋಟಿ ರೂ ವ್ಯಯವಾಗಲಿದೆ.
ಈ ಪರಿಷ್ಕೃತ ತುಟ್ಟಿಭತ್ಯೆಯು 2026ರ ಜುಲೈ 1ರಿಂದ ಜಾರಿಗೆ ಬರುವಂತೆ ಅನ್ವಯಿಸಲಿದೆ. ನವೆಂಬರ್ನಲ್ಲಿ ಸಿಗುವ ಅಕ್ಟೋಬರ್ ತಿಂಗಳ ಸಂಬಳದಲ್ಲಿ ಅರಿಯರ್ಸ್ ಸಮೇತ ತುಟ್ಟಿಭತ್ಯೆ ಹಣ ಸಿಗಲಿದೆ.
ಅಂದರೆ, ಜುಲೈ, ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್, ಈ ನಾಲ್ಕು ತಿಂಗಳಿಗೆ ಹೊಸ ತುಟ್ಟಿಭತ್ಯೆ ದರ ಅನ್ವಯ ಆಗಲಿದೆ. ಇದು ಮುಂದಿನ ತುಟ್ಟಿಭತ್ಯೆ ಏರಿಕೆಯವರೆಗೂ ಮುಂದುವರಿಯುತ್ತದೆ. ಇದರಿಂದ ದೇಶಾದ್ಯಂತ ಇರುವ ಕೋಟ್ಯಂತರ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಆರ್ಥಿಕ ನೆಮ್ಮದಿ ಸಿಗಲಿದೆ.
