ಶಿವಮೊಗ್ಗ: ನಗರದಲ್ಲಿ ದಸರಾ ಮಹೋತ್ಸವದ ಸಂಭ್ರಮ ಮನೆಮಾಡಿದ್ದು, ಅಕ್ಟೋಬರ್ 21ರಂದು ನಡೆಯಲಿರುವ ಜಂಬೂಸವಾರಿಗೆ ಮಹಾನಗರ ಪಾಲಿಕೆ ಭರ್ಜರಿ ಸಿದ್ಧತೆ ನಡೆಸುತ್ತಿದೆ.
ಈ ಹಿನ್ನೆಲೆಯಲ್ಲಿ ಸಕ್ರೆಬೈಲು ಆನೆ ಬಿಡಾರದಿಂದ ಸಾಗರ್, ಬಹದ್ದೂರ್ ಹಾಗೂ ಸೋಮಣ್ಣ ಸೇರಿದಂತೆ ಮೂರು ಆನೆಗಳನ್ನು ಗುರುವಾರ ಪೂಜೆ ಸಲ್ಲಿಸಿ ಲಾರಿಗಳ ಮೂಲಕ ಶಿವಮೊಗ್ಗಕ್ಕೆ ಕರೆತರಲಾಯಿತು.
ಜಂಬೂಸವಾರಿಯಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು 450 ಕೆ.ಜಿ. ತೂಕದ ಬೆಳ್ಳಿ ಅಂಬಾರಿಯಲ್ಲಿ ಹೊತ್ತು ಸಾಗಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಮೂರು ಆನೆಗಳಿಗೂ ಈಗಾಗಲೇ ಸಕ್ರೆಬೈಲಿನ ರಸ್ತೆಗಳಲ್ಲಿ ತಾಲೀಮು ನಡೆಸಲಾಗಿದೆ. ಮುಂದಿನ ಆರು ದಿನಗಳ ಕಾಲ ಶಿವಮೊಗ್ಗದಲ್ಲಿಯೇ ಆನೆಗಳಿಗೆ ತಾಲೀಮು ಮುಂದುವರಿಯಲಿದೆ.
ಹಲವು ವರ್ಷಗಳಿಂದ ಅಂಬಾರಿ ಹೊತ್ತ ಅನುಭವ ಹೊಂದಿರುವ ಸಾಗರ್ ಆನೆ ಈ ಬಾರಿಯೂ ಜಂಬೂಸವಾರಿಯಲ್ಲಿ ಭಾಗವಹಿಸಲಿದೆ. ಅದರೊಂದಿಗೆ ಬಹದ್ದೂರ್ ಹಾಗೂ ಸೋಮಣ್ಣ ಆನೆಗಳೂ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ.
ಆದರೆ ಈ ಬಾರಿ ಅಂಬಾರಿಯನ್ನು ಯಾವ ಆನೆ ಹೊತ್ತು ಸಾಗಲಿದೆ ಎಂಬುದನ್ನು ಇನ್ನೂ ಅಂತಿಮಗೊಳಿಸಿಲ್ಲ.
ಕಳೆದ ವರ್ಷದ ಜಂಬೂಸವಾರಿಯಲ್ಲಿ ಬಾಲಣ್ಣ ಆನೆ ಭಾಗವಹಿಸಿತ್ತು. ಆದರೆ, ಆರೋಗ್ಯ ಸಮಸ್ಯೆ ಹಾಗೂ ಕಿವಿಗೆ ಗಾಯವಾಗಿದ್ದ ಕಾರಣ ಈ ಬಾರಿ ಬಾಲಣ್ಣನ ಬದಲಿಗೆ ಸೋಮಣ್ಣ ಆನೆಯನ್ನು ಕರೆತರಲಾಗಿದೆ.
ಜಂಬೂಸವಾರಿಗೆ ದಿನಗಣನೆ ಆರಂಭವಾಗಿದ್ದು, ಶಿವಮೊಗ್ಗದಲ್ಲಿ ಆನೆಗಳ ತಾಲೀಮು ಹಾಗೂ ಇತರ ಸಿದ್ಧತೆಗಳು ಮುಂದುವರಿಯಲಿವೆ.
