ಬೆಂಗಳೂರು: ರಾಜ್ಯದ ಲಕ್ಷಾಂತರ ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಸಿಹಿ ಇಲ್ಲಿದೆ ಸುದ್ದಿ. 2026-27 ನೇ ಶೈಕ್ಷಣಿಕ ವರ್ಷದ ದಸರಾ ರಜೆಯನ್ನು ಶಿಕ್ಷಣ ಇಲಾಖೆ ಘೋಷಿಸಿದ್ದು ಈ ಬಾರಿ ಬರೋಬ್ಬರಿ 19 ದಿನಗಳ ಕಾಲ ಬಂಪರ್ ರಜೆ ಸಿಗಲಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಕಟಿಸಿರುವ ವಾರ್ಷಿಕ ಶೈಕ್ಷಣಿಕ ವೇಳಾಪಟ್ಟಿಯ ಪ್ರಕಾರ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಈ ಬಂಪರ್ ರಜೆ ಅನ್ವಯವಾಗುತ್ತದೆ. ಆ ಕುರಿತ ವರದಿ ಇಲ್ಲಿದೆ:
ಯಾವಾಗಿನಿಂದ ರಜೆ?
ಸಾರ್ವಜನಿಕ ಶಿಕ್ಷಣ ಇಲಾಖೆಯ ಶೈಕ್ಷಣಿಕ ಕ್ಯಾಲೆಂಡರ್ ಪ್ರಕಾರ, ಅಕ್ಟೋಬರ್ 3, 2026 ಶನಿವಾರ ರಜೆ ಆರಂಭವಾಗುತ್ತದೆ. ಇನ್ನು, ಅಕ್ಟೋಬರ್ 21ರ ಬುಧವಾರದ ವಿಜಯದಶಮಿಯಂದು ರಜೆ ಮುಕ್ತಾಯವಾಗುವುದರೊಂದಿಗೆ, ಅಕ್ಟೋಬರ್ 22ರ ಗುರುವಾರದಂದು ಶಾಲೆಗಳು ಪುನರಾರಂಭಗೊಳ್ಳುತ್ತದೆ.
ಅದರಲ್ಲೂ, ಅಕ್ಟೋಬರ್ 2 ರಂದು ಗಾಂಧಿ ಜಯಂತಿಯ ಸಾರ್ವತ್ರಿಕ ರಜೆ ಇರಲಿದ್ದು, ಅದರ ಮರುದಿನದಿಂದಲೇ (ಅಕ್ಟೋಬರ್ 3) ಅಧಿಕೃತವಾಗಿ ದಸರಾ ರಜೆಗಳು ಆರಂಭವಾಗುವುದರಿಂದ ಮಕ್ಕಳಿಗೆ ಸತತವಾಗಿ ಹಬ್ಬದ ರಜೆಯನ್ನು ಸವಿಯುವ ಸುವರ್ಣ ಅವಕಾಶ ಸಿಕ್ಕಂತಾಗಿದೆ.
ಮುಂದುವರೆದು, ಈ ಶೈಕ್ಷಣಿಕ ವರ್ಷದ 2 ನೇ ಅವಧಿಯು ಅಕ್ಟೋಬರ್ 22, 2026 ರಿಂದ ಏಪ್ರಿಲ್ 10, 2027 ರವರೆಗೆ ಇರಳಿದ್ದು, ಏಪ್ರಿಲ್ 11, 2027 ರಿಂದ ಬೇಸಿಗೆ ರಜೆ ಪ್ರಾರಂಭವಾಗಲಿದೆ.
