ತೆಲಂಗಾಣ: ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಅಲ್ಲದೆ, ಕಾರಿನಲ್ಲಿ ಪ್ರಯಾಣಿಸುವವರು ಚಾಲಕ ಸೇರಿದಂತೆ ಸೀಟ್ ಬೆಲ್ಟ್ ಧರಿಸಬೇಕು ಎಂಬ ಮುಂತಾದ ಸಂಚಾರಿ ನಿಯಮಗಳು ಸಾಮಾನ್ಯ. ಜೊತೆಗೆ ಈ ನಿಯಮವನ್ನು ಉಲ್ಲಂಘಿಸಿದರೆ ಭಾರೀ ದಂಡ ಕೂಡ ಕಟ್ಟಬೇಕಾಗುತ್ತದೆ. ಆದರೆ ಇದೀಗ ಟ್ರ್ಯಾಕ್ಟರ್ ಚಾಲಕನೊರ್ವನಿಗೆ ಸೀಟ್ ಬೆಲ್ಟ್ ಧರಿಸಿಲ್ಲ ಎಂಬ ಕಾರಣಕ್ಕೆ ಪೊಲೀಸರು ದಂಡ ವಿಧಿಸಿದ್ದಾರೆ. ಈ ವಿಚಿತ್ರ ಘಟನೆ ತೆಲಂಗಾಣದ ಭದ್ರಾದ್ರಿ ಕೊತಗುಡೆಂ ಜಿಲ್ಲೆಯಲ್ಲಿ ನಡೆದಿದೆ.
ಭದ್ರಾದ್ರಿ ಕೊತಗುಡೆಂ ಜಿಲ್ಲೆ ಪಲ್ವಂಚದಲ್ಲಿ ಸೀಟ್ ಬೆಲ್ಟ್ ಧರಿಸದ ಟ್ರ್ಯಾಕ್ಟರ್ ಚಾಲಕನಿಗೆ ಪಲ್ವಂಚ ಪೊಲೀಸರು 100 ರೂಪಾಯಿ ದಂಡ ವಿಧಿಸಿದ್ದಾರೆ. ಪಲ್ವಂಚ ಮಂಡಲ ಜಗನ್ನಾಥಪುರದ ಟ್ರ್ಯಾಕ್ಟರ್ ಚಾಲಕ ನಾಗಿರೆಡ್ಡಿ ಎಂಬಾತನಿಗೆ ಪೊಲೀಸರು ದಂಡ ಹಾಕಿದ್ದಾರೆ.
ಇದರಿಂದ ಗಾಬರಿಗೊಂಡ ಟ್ರ್ಯಾಕ್ಟರ್ ಚಾಲಕ ನಾಗಿರೆಡ್ಡಿ, ಅವರಷ್ಟೇ ಅಲ್ಲದೆ ಸುತ್ತಮುತ್ತಲಿನ ಕೃಷಿಕರು ಅಚ್ಚರಿಗೊಂಡಿದ್ದಾರೆ. ಬಳಿಕ ಟ್ರ್ಯಾಕ್ಟರ್ ಶೋರೂಂಗೆ ಕರೆ ಮಾಡಿದ್ದು, ಟ್ರ್ಯಾಕ್ಟರ್ ಗೆ ಸೀಟ್ ಬೆಲ್ಟ್ ಇಲ್ಲ ಎಂದು ಶೋರೂಂನಲ್ಲಿ ಹೇಳಿರುವುದಾಗಿ ಟ್ರ್ಯಾಕ್ಟರ್ ಚಾಲಕ ತಿಳಿಸಿದ್ದಾರೆ.
ಈ ಹಿಂದೆ ಮಹಬೂಬಾಬಾದ್ ಜಿಲ್ಲೆಯಲ್ಲಿ ಇಂತಹದ್ದೇ ಘಟನೆ ನಡೆದಿತ್ತು. ಟ್ರ್ಯಾಕ್ಟರ್ ಡ್ರೈವರ್‌ಗೆ ಇದೇ ರೀತಿಯ ಚಲನ್ ಬಂದಿತ್ತು. ಮಹಬೂಬಾಬಾದ್ ಜಿಲ್ಲೆಯ ಸೀತಾನಗರಂ ಗ್ರಾಮದ ಟ್ರ್ಯಾಕ್ಟರ್ ಚಾಲಕನಿಗೆ ಹೆಲ್ಮೆಟ್ ಧರಿಸದ ಕಾರಣಕ್ಕೆ ದಂಡ ಹಾಕಲಾಗಿತ್ತು.