Trending

ತೀರ್ಥಹಳ್ಳಿಯಲ್ಲಿ ಮಳೆರಾಯನ ಆರ್ಭಟ : ಗುಡ್ಡ ಕುಸಿದು ತಾಯಿ-ತಂದೆ, ಮಗು ಸಾವು

Spread the love

ತೀರ್ಥಹಳ್ಳಿ : ಧಾರಾಕಾರ ಮಳೆಯ ಪರಿಣಾಮ ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ 15ನೇ ವಾರ್ಡ್‌ನ ಗಾಂಧಿನಗರದಲ್ಲಿ ಗುಡ್ಡ ಕುಸಿದು ತಗಡಿನ ಶೆಡ್ ಮೇಲೆ ಬಿದ್ದ ಪರಿಣಾಮ ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ದಾರುಣ ಘಟನೆ ಭಾನುವಾರ ಮುಂಜಾನೆ ಸುಮಾರು 3 ಗಂಟೆಗೆ ನಡೆದಿದೆ.

ಮೃತರನ್ನು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮಲ್ಲಿಕಾರ್ಜುನ (35), ಪತ್ನಿ ನಾಗವೇಣಿ (28) ಹಾಗೂ ಪುತ್ರ ಸಂತೋಷ್ (3) ಎಂದು ಗುರುತಿಸಲಾಗಿದೆ.

ಗುಡ್ಡಕ್ಕೆ ಹೊಂದಿಕೊಂಡಿದ್ದ ಮತ್ತೊಂದು ಶೆಡ್‌ನಲ್ಲಿದ್ದ ಕೆಲ ಕೂಲಿ ಕಾರ್ಮಿಕರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸೀಬಿನಕೆರೆಯಿಂದ ಗಾಂಧಿನಗರಕ್ಕೆ ಸಂಪರ್ಕಿಸುವ ರಸ್ತೆಯ ತಮ್ಮಡಿಕೊಪ್ಪ ಕೆರೆ ಸಮೀಪ, ರಮೇಶ್ ಗೌಡ ಅವರ ಮನೆ ಪಕ್ಕದ ಗುಡ್ಡದ ಮಣ್ಣು ಕುಸಿದು ಈ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಉತ್ತರ ಕರ್ನಾಟಕ ಭಾಗದಿಂದ ಕೂಲಿ ಕೆಲಸಕ್ಕಾಗಿ ಆಗಮಿಸಿದ್ದ ಕಾರ್ಮಿಕರು ಗುಡ್ಡದ ಸಮೀಪ ನಿರ್ಮಿಸಿಕೊಂಡಿದ್ದ ತಾತ್ಕಾಲಿಕ ಶೆಡ್‌ಗಳಲ್ಲಿ ವಾಸವಾಗಿದ್ದರು. ನಿರಂತರ ಮಳೆಯಿಂದ ಗುಡ್ಡ ಕುಸಿದು ಶೆಡ್ ಮೇಲೆ ಮಣ್ಣು ಬಿದ್ದ ಪರಿಣಾಮ ಈ ಅವಘಡ ಸಂಭವಿಸಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಮುಂಜಾನೆ 4 ಗಂಟೆಯಿಂದಲೇ ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ, ತಾಲೂಕು ಆಡಳಿತ, ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಮತ್ತು ಮಣ್ಣು ತೆರವು ಕಾರ್ಯಾಚರಣೆ ನಡೆಸಿದರು.

ಘಟನೆ ಸಂಬಂಧ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದ್ದು, ನಿರಂತರ ಮಳೆಯಿಂದ ಗುಡ್ಡ ಪ್ರದೇಶಗಳಲ್ಲಿ ವಾಸಿಸುವವರು ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

[pj-news-ticker]