ಬೆಂಗಳೂರು : ರಾಜ್ಯದಲ್ಲಿ ನಡೆದಿದೆ ಎನ್ನಲಾದ ಮತ್ತೊಂದು ಭಾರಿ ಅಕ್ರಮ ಬೆಳಕಿಗೆ ಬಂದಿದೆ. ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಗೋಲ್ಮಾಲ್ ನಡೆದಿದೆ ಎಂದು ಬಹಿರಂಗಪಡಿಸುವ ಆಡಿಯೊ, ವಿಡಿಯೊ ಹೊರ ಬಂದಿದ್ದು ಭಾರಿ ಸಂಚಲನ ಸೃಷ್ಟಿಸಿದೆ.
ಒಂದು ಹುದ್ದೆಗೆ ಬರೋಬ್ಬರಿ 80 ಲಕ್ಷ ರುಪಾಯಿ ಡೀಲ್ ಆಗಿದೆ ಎಂದು ಮೂಲಗಳು ತಿಳಿಸಿವೆ. ರಾಜ್ಯ ಸರ್ಕಾರ ಕೂಡಲೇ ಈ ಅಕ್ರಮ ನೇಮಕಾತಿ ಪ್ರಕ್ರಿಯೆಯನ್ನು ರದ್ದುಪಡಿಸಿ, ಸಮಗ್ರ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು. ದಲ್ಲಾಳಿಗಳು ಮತ್ತು ಇದರ ಹಿಂದಿರುವ ಕಾಣದ ಕೈಗಳನ್ನು ಜೈಲಿಗಟ್ಟಬೇಕು. ಉದ್ಯೋಗಾಕಾಂಕ್ಷಿಗಳಿಗೆ ನ್ಯಾಯ ಒದಗಿಸಬೇಕು ಅಭ್ಯರ್ಥಿಗಳು ಆಗ್ರಹಿಸಿದ್ದಾರೆ.
ಸದ್ಯ ಹೂರ ಬಿದ್ದಿರುವ ಆಡಿಯೊ, ವಿಡಿಯೊದಲ್ಲಿ ಉದ್ಯೋಗಾರ್ಥಿಗಳನ್ನು ಸಂಪರ್ಕಿಸಿ ಏಜೆಂಟರು ಹಣಕ್ಕೆ ಬೇಡಿಕೆ ಇಟ್ಟಿರುವುದು ಗೊತ್ತಾಗಿದೆ. ಅಭ್ಯರ್ಥಿಗಳು ನಡೆಸಿದ ಸ್ಟ್ರಿಂಗ್ ಆಪರೇಷನ್ನಲ್ಲಿ ಈ ವಿವರ ಬಹಿರಂಗವಾಗಿದೆ. ಪೋಸ್ಟಿಂಗ್ ಬೇಕೆಂದರೆ ಕಾಸ್ಟ್ ಆಗುತ್ತೆ ಎಂದು ಏಜೆಂಟರು ನೇರವಾಗಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.
ರಾಜ್ಯದಲ್ಲಿ ಒಟ್ಟು 400 ಪಶುವೈದ್ಯಾಧಿಕಾರಿ ಹುದ್ದೆಗಳಿಗೆ ಜನವರಿ 8ರಂದು ಲಿಖಿತ ಪರೀಕ್ಷೆ ನಡೆದಿತ್ತು. ಜುಲೈ 17ರಂದು ಫಲಿತಾಂಶ ಹೊರಬಿದ್ದಾಗ ಅಭ್ಯರ್ಥಿಗಳಿಗೆ ಅಚ್ಚರಿ ಕಾದಿತ್ತು. ಒಟ್ಟು ನೇಮಕಾತಿ ಪ್ರಕ್ರಿಯೆಯಲ್ಲಿ ಶೇ. 60ರಷ್ಟು ಹುದ್ದೆಗಳಲ್ಲಿ ಅಕ್ರಮ ನಡೆದಿದೆ ಎಂದು ಅಭ್ಯರ್ಥಿಗಳು ಆರೋಪಿಸಿದ್ದಾರೆ. ಇದರ ಹಿಂದೆ ಇತ್ತೀಚೆಗಷ್ಟೇ ಅಮಾನತ್ತಾದ ಕೆಪಿಎಸ್ಸಿ ಸದಸ್ಯ ಶಿವಶಂಕರಪ್ಪ ಸಾಹುಕಾರ್ ಅವರ ಕೈವಾಡವಿದೆ ಎನ್ನಲಾಗಿದೆ.
ಮೊಹಮ್ಮದ್ ಆರಿಫ್ ಎಂಬ ಮಧ್ಯವರ್ತಿ ಕಾಂತಕುಮಾರ್ ಎಂಬವವರ ಜತೆ ಫೋನ್ನಲ್ಲಿ ಹಣಕ್ಕೆ ಡಿಮ್ಯಾಂಡ್ ಮಾಡಿರುವ ವಿಡಿಯೊ ಈಗ ವೈರಲ್ ಆಗಿದೆ. ಶಿವಶಂಕರಪ್ಪ ಸಂಬಂಧಿಕರು ಮೆರಿಟ್ ಅಂಕ ಗಳಿಸಿದ್ದಾರೆ ಎನ್ನುವ ದೂರು ಕೇಳಿ ಬಂದಿದೆ.
