ಬೆಂಗಳೂರು : ಬಿಜೆಪಿಯವರ ಆಂತರಿಕ ಬೆಳವಣಿಗೆ, ಅಲ್ಲೋಲ ಕಲ್ಲೋಲಕ್ಕೆ ಶೋಭಾ ಕರಂದ್ಲಾಜೆ ಕಾರಣನೇ ವಿನಹ ಬೇರೆ ಯಾವ ಶಾಸಕರು ಅಲ್ಲ ಎಂದು ಬಿಜೆಪಿ ಉಚ್ಛಾಟಿತ ಶಾಸಕ ಎಸ್.ಟಿ.ಸೋಮಶೇಖರ್ ಆರೋಪಿಸಿದ್ದಾರೆ.
ವಿಧಾನಸೌಧದಲ್ಲಿಂದು ಮಾತನಾಡಿದ ಅವರು, ಅಡ್ಡ ಮತದಾನ ಮಾಡಿದ ಎಸ್.ಟಿ.ಸೋಮಶೇಖರ್, ಶಿವರಾಮ್ ಹೆಬ್ಬಾರ್ ರಾಜೀನಾಮೆ ಕೊಟ್ಟು ಹೋಗಲಿ ಎಂಬ ಶೋಭಾ ಕರಂದ್ಲಾಜೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಶೋಭಾ ಕರಂದ್ಲಾಜೆಗೆ ವಿಜಯೇಂದ್ರ ಕಂಡರೆ ಅಸೂಯೆ. ವಿಜಯೇಂದ್ರ ಅಧ್ಯಕ್ಷ ಆಗಿರೋದನ್ನು ಅವರಿಗೆ ಸಹಿಸಲು ಆಗುತ್ತಿಲ್ಲ. ಆರ್.ಅಶೋಕ್ ವಿರೋಧ ಪಕ್ಷ ನಾಯಕ ಆಗಿರೋದೂ ಅಸೂಯೆ. ಈ ಇಬ್ಬರಿಗೂ ಹೇಗಾದರೂ ಮಾಡಿ ಕೆಟ್ಟ ಹೆಸರು ತರಬೇಕೆಂದು ಹೊರಟಿದ್ದಾರೆ.
ಈ ಇಬ್ಬರನ್ನೂ ರಾಜಕೀಯದಿಂದ ಮುಗಿಸಿದ್ರೆ, ನಾನು ರಾಜಕೀಯದಲ್ಲಿ ಮೇಲೆ ಬರಬಹುದೆಂಬ ಮನಸ್ಥಿತಿ ಇದೆ ಎಂದು ಟೀಕಿಸಿದರು.
63 ಜನ ಶಾಸಕರನ್ನು ಧರ್ಮಸ್ಥಳಕ್ಕೆ ಕರೆದುಕೊಂಡು ಹೋಗುವ ಅವಶ್ಯಕತೆ ಇಲ್ಲ. ಮೊದಲು ಶೋಭಾ ಕರಂದ್ಲಾಜೆ ಅವರನ್ನು ಕರೆದುಕೊಂಡು ಹೋಗಿ ಆಣೆ ಪ್ರಮಾಣ ಮಾಡಿಸಿದ್ರೆ, ಎಲ್ಲಾ ವಿಷಯಗಳು ಹೊರಗೆ ಬರುತ್ತವೆ. ಬಿಜೆಪಿಯವರು ನಮ್ಮನ್ನು ಉಚ್ಚಾಟನೆ ಮಾಡಿದ್ದಾರೆ. ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಏನಿದೆ?. ಕೇಂದ್ರ ಸಚಿವೆಯಾಗಿ ಒಂದು ಕ್ಷೇತ್ರ ಅಭಿವೃದ್ಧಿ ಮಾಡಲು ಆಗಿಲ್ಲ.
ಆರ್ ಅಶೋಕ್, ವಿಜಯೇಂದ್ರ ಅವರನ್ನು ಪದಚ್ಯುತಿಗೊಳಿಸಿ ಅವಮಾನ ಮಾಡಬೇಕೆಂಬುದೇ ಶೋಭಾ ಉದ್ದೇಶ. ಆದ್ದರಿಂದ ಮೊದಲು ಧರ್ಮಸ್ಥಳಕ್ಕೆ ಕರೆದುಕೊಂಡು ಹೋಗಿ ಪ್ರಮಾಣ ಮಾಡಿಸಿದ್ರೆ, ಅವರ ನಿಜ ಬಣ್ಣ ಬಯಲಾಗುತ್ತದೆ ಎಂದರು.
ನಮಗೆ ಕಾಂಗ್ರೆಸ್ ಸರ್ಕಾರ ಕ್ಷೇತ್ರ ಅನುದಾನ ಕೊಟ್ಟಿದೆ. ನಾವು ಅವರಿಗೆ ಮತ ಹಾಕಿದ್ದೇವೆ. ನಾವು ಓಪನ್ ಆಗಿಯೇ ಮತ ಹಾಕಿದ್ದೇವೆ ಅಂತ ಹೇಳಿದ್ದೇವೆ. ಇವರ ತಾಕತ್ತಿಗೆ ಅಡ್ಡ ಮತ ಹಾಕಿದವರು ಯಾರು ಅಂತ ಕಂಡು ಹಿಡಿಯಲಿ. ನನ್ನ ಕೆಣಕೋದು ಬೇಡ. ಕೆಣಕಿದರೆ ನಾವೂ ತಕ್ಕ ಉತ್ತರ ಕೊಡ್ತೇವೆ ಎಂದು ವಾಗ್ದಾಳಿ ನಡೆಸಿದರು.
