ಮೈಸೂರು: ‘ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಇದೇ ಮೊದಲ ಬಾರಿಗೆ ಕರಾವಳಿಯ ಕಂಬಳ ಕ್ರೀಡೆಯನ್ನು ವಿಶೇಷ ಆಕರ್ಷಣೆಯಾಗಿ ಆಯೋಜಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ ತಿಳಿಸಿದರು.
ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಕಳೆದ ವರ್ಷವೇ ಕಂಬಳ ಆಯೋಜಿಸಲು ಉದ್ದೇಶಿಸಲಾಗಿತ್ತು.ಆದರೆ, ಸರಿಯಾದ ಸ್ಥಳ ದೊರಕದಿದ್ದರಿಂದ ಸಾಧ್ಯವಾಗಲಿಲ್ಲ’ ಎಂದು ಹೇಳಿದರು.
‘ಈ ಬಾರಿ ಆಯೋಜನೆಗಾಗಿ 3 ತಿಂಗಳಿಗೆ ಮುಂಚಿತವಾಗಿಯೇ ತಯಾರಿ ಆರಂಭಿಸಲಾಗಿದೆ. ವಿಜಯನಗರ ಮೊದಲನೇ ಹಂತ, ವಿಜಯನಗರ 4ನೇ ಹಂತ ಹಾಗೂ ಸಾತಗಳ್ಳಿಯ ವರ್ತುಲ ರಸ್ತೆಯ ಬಳಿ ಸೇರಿದಂತೆ ಮೂರು ಸ್ಥಳ ಗುರುತಿಸಲಾಗಿದೆ. ಇದರಲ್ಲಿ ಒಂದು ಸ್ಥಳವನ್ನು ಆಯ್ಕೆ ಮಾಡಲಾಗುವುದು’ ಎಂದು ಮಾಹಿತಿ ನೀಡಿದರು.
‘ಕಂಬಳ ಆಯೋಜನೆಗೆ ಕನಿಷ್ಠ ಏಳು ಎಕರೆ ಜಾಗ ಬೇಕಿದೆ. ಪಾರ್ಕಿಂಗ್ ವ್ಯವಸ್ಥೆಗೆ, ವೀಕ್ಷಕರ ಗ್ಯಾಲರಿ ನಿರ್ಮಾಣಕ್ಕೆ, ಕೋಣಗಳು ಹಾಗೂ ಆಯೋಜಕರು ಉಳಿದುಕೊಳ್ಳಲು ಬೇಕಾದಷ್ಟು ಸ್ಥಳ ಲಭ್ಯವಿದೆಯೇ ಎಂಬುದನ್ನು ಪರಿಶೀಲಿಸಿ ನಿರ್ಧರಿಸಲಾಗುವುದು’ ಎಂದರು.
‘ಕಂಬಳ ಕಾರ್ಯಕ್ರಮದ ಉಪ ಸಮಿತಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗುವುದು’ ಎಂದು ತಿಳಿಸಿದರು.
ಜಿ.ಪಂ. ಸಿಇಒ ಎಸ್. ಯುಕೇಶ್‌ಕುಮಾರ್, ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ, ಕರ್ನಾಟಕ ರಾಜ್ಯ ಕಂಬಳ ಸಂಘದ ಪ್ರಧಾನ ಕಾರ್ಯದರ್ಶಿ ವಿಜಯ್‌ಕುಮಾರ್, ಬೆಂಗಳೂರು ಕಂಬಳ ಕಾರ್ಯಾಧ್ಯಕ್ಷ ಮುರಳೀಧರ್ ರೈ ಹಾಗೂ ಜಯಸೂರ್ಯ ರೈ ಮೊದಲಾದವರು ಪಾಲ್ಗೊಂಡಿದ್ದರು.
