ಪೀಣ್ಯ ದಾಸರಹಳ್ಳಿ: ಮನೆಗೆ ಬಣ್ಣ ಬಳಿಯುವ ನೆಪದಲ್ಲಿ ಬಂದ ಪೇಂಟರ್ಗಳು ಮಾಲಿಕರ ನಂಬಿಕೆಯನ್ನೇ ಬಂಡವಾಳವಾಗಿಸಿಕೊಂಡು 25 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಹೋಬಳಿಯ ರಾಮಾಂಜನೇಯ ಬಡಾವಣೆಯಲ್ಲಿ ನಡೆದಿದೆ.
ರಾಮಾಂಜನೇಯ ಲೇಔಟ್ ನಿವಾಸಿ ನಿತ್ಯಾ ಮತ್ತು ಚಂದ್ರಶೇಖರ್ದಂಪತಿ ಮನೆಯಲ್ಲಿ ದರೋಡೆ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
ರಾಮಾಂಜನೇಯ ಬಡಾವಣೆಯಲ್ಲಿ ಎರಡು ಅಂತಸ್ತಿನ ಮನೆ ಮಾಲಿಕರಾಗಿರುವ ನಿತ್ಯಾ ಹಾಗೂ ಚಂದ್ರಶೇಖರ್ದಂಪತಿ, ಕಳೆದ ಒಂದು ತಿಂಗಳ ಹಿಂದೆಯಷ್ಟೇ ಅವರ ಮನೆಯ ಮೊದಲ ಮಹಡಿಯಲ್ಲಿದ್ದ ಬಾಡಿಗೆದಾರರು ಖಾಲಿ ಮಾಡಿದ್ದರು.
ಅದನ್ನು ಗಮನಿಸಿದ್ದ ಆರೋಪಿ ಪೇಂಟರ್ಲಿಂಗರಾಜು ಎಂಬಾತ, ಮನೆ ಮಾಲಿಕ ಚಂದ್ರಶೇಖರ್ ಅವರನ್ನು ಭೇಟಿಯಾಗಿ, ನಿಮ್ಮ ಮನೆಗೆ ನಾವೇ ಕಡಿಮೆ ದರದಲ್ಲಿ ಪೇಂಟಿಂಗ್ ಮಾಡಿಕೊಡುತ್ತೇವೆ ಎಂದು ನಂಬಿಸಿ ತನ್ನ ಮೊಬೈಲ್ ನಂಬರ್ ನೀಡಿದ್ದ ಎರಡು ದಿನಗಳ ಬಳಿಕ ಚಂದ್ರಶೇಖರ್, ಲಿಂಗರಾಜುವಿಗೆ ಕರೆ ಮಾಡಿ ಪೇಂಟಿಂಗ್ ಮಾಡಲು ಸೂಚಿಸಿದ್ದರು.
ಹೀಗಾಗಿ ಲಿಂಗರಾಜು, ತನ್ನ ಜತೆ ಪವನ್ ಕುಮಾರ್, ಮಂಜುನಾಥ್ ಮತ್ತು ವೆಂಕಟೇಶ್ ಎಂಬ ಮೂವರು ಕೆಲಸಗಾರರನ್ನು ಕರೆತಂದು ಮೊದಲ ಮಹಡಿಗೆ ಪೇಂಟಿಂಗ್ ಮಾಡಿಸಿದ್ದ. ಕೆಲಸ ಚೆನ್ನಾಗಿ ಮಾಡಿದ್ದರಿಂದ, ಮಾಲಿಕರು ತಾವು ವಾಸವಿದ್ದ ಕೆಳಮಹಡಿಯ ಕಿಟಕಿಗಳಿಗೂ ಬಣ್ಣ ಬಳಿಯುವಂತೆ ತಿಳಿಸಿದರು. ನಂತರ ಪೇಂಟರ್ಗಳು ನಿತ್ಯ ದಂಪತಿಗಳು ವಾಸವಿದ್ದ ಬೆಡ್ರೂಂಗೆ ಪೇಂಟ್ ಮಾಡಲು ಹೋಗಿದ್ದಾರೆ.
ಈ ವೇಳೆ ಬೆಡ್ ರೂಮ್ ಒಳಗಡೆ ಪೇಂಟ್ ನಡೆಯುತ್ತಿದ್ದಾಗ ಹೊರಗಡೆ ಮಗು ಜೋರಾಗಿ ಅಳುವ ಶಬ್ದ ಕೇಳಿಸಿದೆ. ತಾಯಿ ನಿತ್ಯಾ ಅವರು ಮಗುವನ್ನು ಸಮಾಧಾನಪಡಿಸಲು ರೂಮ್ನಿಂದ ಹೊರಗೆ ಹೋಗಿ ವಾಪಸ್ ಬರುವಷ್ಟರಲ್ಲಿ, ಪೇಂಟರ್ ಗಳು ತಮ್ಮ ಕೈಚಳಕ ತೋರಿಸಿದ್ದರು. ಕೇವಲ ಐದಾರು ನಿಮಿಷಗಳ ಗ್ಯಾಪ್ನಲ್ಲಿ ಬೀರುವಿನಲ್ಲಿದ್ದ ಸುಮಾರು 254 ಗ್ರಾಂ ತೂಕದ ಚಿನ್ನಾಭರಣಗಳನ್ನು ದೋಚಿ ಜಾಗ ಖಾಲಿ ಮಾಡಿದ್ದಾರೆ.
ಕೆಲಸ ಮುಗಿಯುವ ಮುನ್ನವೇ ಪೇಂಟರ್ಗಳು ದಿಢೀರ್ನಾಪತ್ತೆಯಾಗಿದ್ದನ್ನು ಕಂಡು ಅನುಮಾನಗೊಂಡ ನಿತ್ಯ, ರೂಮ್ನ ಬೀರು ಪರಿಶೀಲಿಸಿದಾಗ ಕಳ್ಳತನ ಬೆಳಕಿಗೆ ಬಂದಿದೆ. ಕದ್ದ ಆಭರಣಗಳ ಒಟ್ಟು ಮೌಲ್ಯ ಸುಮಾರು 25 ಲಕ್ಷ ರೂ. ಎಂದು ಅಂದಾಜಿಸಲಾಗಿದೆ ಎಂದು ಪೊಲೀಸರು ಹೇಳಿದರು. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
