Trending

ಭದ್ರಾವತಿ ವ್ಯಕ್ತಿಯ ₹38 ಲಕ್ಷ ದರೋಡೆ ಪ್ರಕರಣ ಭೇದಿಸಿದ ಪೊಲೀಸರು : ನಾಲ್ವರು ಆರೋಪಿಗಳ ಬಂಧನ

Spread the love

ದಾವಣಗೆರೆ: ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಕೊಮಾರನಹಳ್ಳಿ ಕಣಿವೆ ಬಳಿ ಓಮ್ನಿ ವಾಹನ ಅಡ್ಡಗಟ್ಟಿ ₹38 ಲಕ್ಷ ಸುಲಿಗೆ ನಡೆಸಿದ್ದ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ಮೆಹಬೂಬ್, ಹನುಮಂತಪ್ಪ ಅಲಿಯಾಸ್ ಜಂಗ್ಲಿ ಹಾಗೂ ದಾವಣಗೆರೆಯ ವಿ. ಅಜ್ಜಪ್ಪ ಅಲಿಯಾಸ್ ಅಜಯ್ ಮತ್ತು ಅನಿಲ್ ಬಿ. ಎಂದು ಗುರುತಿಸಲಾಗಿದೆ.

ಆರೋಪಿಗಳಿಂದ ₹23.30 ಲಕ್ಷ ನಗದು, ₹6 ಲಕ್ಷ ಮೌಲ್ಯದ ಕಾರು ಹಾಗೂ ₹70 ಸಾವಿರ ಮೌಲ್ಯದ ಮೂರು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಾರ್ಚ್ ತಿಂಗಳಲ್ಲಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಮಾಲತೇಶ ಅವರು ಹಗರಿಬೊಮ್ಮನಹಳ್ಳಿಯಲ್ಲಿ ಜಮೀನು ಮಾರಾಟ ಮಾಡಿ ಪಡೆದ ಹಣದೊಂದಿಗೆ ಸ್ನೇಹಿತನ ಜತೆ ಓಮ್ನಿ ವಾಹನದಲ್ಲಿ ತೆರಳುತ್ತಿದ್ದರು. ಈ ವೇಳೆ ಕೊಮಾರನಹಳ್ಳಿ ಕಣಿವೆ ಬಳಿ ವಾಹನ ಅಡ್ಡಗಟ್ಟಿದ ದುಷ್ಕರ್ಮಿಗಳು ಬೆದರಿಕೆ ಹಾಕಿ ₹38 ಲಕ್ಷ ನಗದು ಇದ್ದ ಬ್ಯಾಗ್ ಸುಲಿಗೆ ಮಾಡಿದ್ದರು. ಈ ಸಂಬಂಧ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆಗೆ ಮೂರು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಚನ್ನಗಿರಿ ಉಪವಿಭಾಗದ ಡಿವೈಎಸ್‌ಪಿ ರುದ್ರಪ್ಪ ಎಸ್. ಉಜ್ಜನಕೊಪ್ಪ ಮಾರ್ಗದರ್ಶನದಲ್ಲಿ, ಹೊನ್ನಾಳಿ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಸುನೀಲ್ ಕುಮಾರ್ ಎಚ್. ನೇತೃತ್ವದ ತಂಡ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳ ಪತ್ತೆ ಕಾರ್ಯ ನಡೆಸಿತು.

ಜಮೀನು ಮಾರಾಟಕ್ಕೆ ಮಧ್ಯವರ್ತಿಯಾಗಿದ್ದ ಮೆಹಬೂಬ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ತನ್ನ ಸಹಚರರೊಂದಿಗೆ ಸೇರಿ ಸುಲಿಗೆ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಟಿ. ಶೇಖರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಪ್ರಕರಣ ಭೇದಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಎಸ್‌ಪಿ ಅಭಿನಂದಿಸಿದ್ದಾರೆ.

[pj-news-ticker]