Trending

ಕೊಲೆ ಯತ್ನ ಪ್ರಕರಣ : ಉತ್ತರ ಪ್ರದೇಶದಲ್ಲಿ ಟಿಎಂಸಿ ಮಾಜಿ ಶಾಸಕ ಅರೆಸ್ಟ್‌

Spread the love

ಲಖನೌ : ಸುಲಿಗೆ ಮತ್ತು ಕೊಲೆ ಯತ್ನ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್‌ನ ಮಾಜಿ ಶಾಸಕರೊಬ್ಬರನ್ನು ಪಶ್ಚಿಮ ಬಂಗಾಳ ಪೊಲೀಸರ ತಂಡವು ಉತ್ತರ ಪ್ರದೇಶದಲ್ಲಿ ಬಂಧಿಸಿದೆ.

ಪಶ್ಚಿಮ ಬಂಗಾಳದ ಬುರ್ದ್ವಾನ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಟಿಎಂಸಿ ಮಾಜಿ ಶಾಸಕ ಖೋಕೋನ್ ದಾಸ್ ಅವರನ್ನು ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಜಿಲ್ಲೆಯ ಹಂಡಿಯಾ ಟೋಲ್ ಪ್ಲಾಜಾ ಬಳಿ ಬಂಧಿಸಲಾಯಿತು.

ಸ್ಥಳೀಯ ಹಂಡಿಯಾ ಪೊಲೀಸರ ಸಹಾಯದಿಂದ ಬುರ್ದ್ವಾನ್ ಪೊಲೀಸರು ಈ ಕಾರ್ಯಾಚರಣೆಯನ್ನು ನಡೆಸಿದರು.

2025ರ ಜೂನ್ 6ರಂದು ದಾಸ್ ವಿರುದ್ಧ ಸುಲಿಗೆ, ಕ್ರಿಮಿನಲ್ ಬೆದರಿಕೆ ಮತ್ತು ಕೊಲೆಯತ್ನ ಸೇರಿ ಹಲವು ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಹಲವು ದಿನಗಳಿಂದ ಅವರಿಗಾಗಿ ಹುಡುಕಾಟ ನಡೆಸುತ್ತಿದ್ದರು.

ದಾಸ್ ದೆಹಲಿಯಿಂದ ಕೋಲ್ಕತ್ತಾಗೆ ಟೊಯೋಟಾ ಫಾರ್ಚೂನರ್‌ನಲ್ಲಿ ಪ್ರಯಾಣಿಸುತ್ತಿದ್ದಾರೆ ಎಂಬ ಮೂಲಗಳಿಂದ ಮಾಹಿತಿ ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಸುಳಿವು ದೊರೆತ ಮೇರೆಗೆ ಅಧಿಕಾರಿಗಳು ಟೋಲ್ ಪ್ಲಾಜಾ ಬಳಿ ಕಾದು ಕುಳಿತು ವಾಹನ ಬಂದಾಗ ತಡೆದರು. ಎಸ್‌ಯುವಿಯಲ್ಲಿ ಪ್ರಯಾಣಿಸುತ್ತಿದ್ದ ಇತರ ಮೂವರು ಪ್ರಯಾಣಿಕರೊಂದಿಗೆ ದಾಸ್ ಅವರನ್ನು ವಶಕ್ಕೆ ಪಡೆಯಲಾಯಿತು. ಈ ಬಂಧನದಿಂದ ಪಶ್ಚಿಮ ಬಂಗಾಳ ಪೊಲೀಸರು ಆರಂಭಿಸಿದ್ದ ಅಂತಾರಾಜ್ಯ ಶೋಧ ಕಾರ್ಯಾಚರಣೆ ಕೊನೆಗೊಂಡಿತು.

ಬಂಧನದ ನಂತರ, ದಾಸ್ ಅವರನ್ನು ಕೋರ್ಟ್ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಟ್ರಾನ್ಸಿಟ್ ರಿಮಾಂಡ್ ಮಂಜೂರು ಮಾಡಿದ್ದು, ಮುಂದಿನ ತನಿಖೆಗಾಗಿ ಅವರನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ಯಲು ಪೊಲೀಸ್ ತಂಡಕ್ಕೆ ಅನುಮತಿ ನೀಡಿದೆ. ನಂತರ ಪೊಲೀಸ್ ತಂಡವು ಆರೋಪಿಯನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

[pj-news-ticker]