ಬೆಂಗಳೂರು: ಪಿಯುಸಿ ಬಳಿಕ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆಯಲು ರಾಷ್ಟ್ರೀಯ ಮಟ್ಟದಲ್ಲಿ ನಡೆಸಲಾಗುವ ಪ್ರವೇಶ ಪರೀಕ್ಷೆ ನೀಟ್ ನಲ್ಲಿ ಪಶ್ನೆ ಪತ್ರಿಕೆ ಸೋರಿಕೆಯಾಗಿದ್ದು, ಪರೀಕ್ಷೆಯನ್ನೇ ರದ್ದುಪಡಿಸಲಾಗಿದೆ. ಇದರಿಂದ ಮನನೊಂದು ಬೆಂಗಳೂರು ಸೇರಿದಂತೆ ದೇಶಾದ್ಯಂತ ನಾಲ್ವರು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೇ 3ರಂದು ನೀಟ್ ನಡೆಸಲಾಗಿತ್ತು. ಬಳಿಕ ಪ್ರಶ್ನೆ ಪತ್ರಿಕೆ ಸೋರಿಕೆಯಾದ ವಿಚಾರ ಹೊರ ಬೀಳುತ್ತಿದ್ದಂತೆ ಪರೀಕ್ಷೆಯನ್ನೇ ರದ್ದು ಪಡಿಸಿ ಜೂನ್ ಜೂನ್ 21ಕ್ಕೆ ಮರುನಿಗದಿಪಡಸಿಲಾಗಿದೆ. ಆದರೆ ಪರೀಕ್ಷೆ ರದ್ದಾಗಿದ್ದು ನಾಲ್ವರು ವಿದ್ಯಾರ್ಥಿಗಳ ಪ್ರಾಣಕ್ಕೆ ಎರವಾಗಿದೆ.
ಮೂಲಗಳ ಪ್ರಕಾರ ಆತ್ಮಹತ್ಯೆಗೆ ಶರಣಾದ ಈ ವಿದ್ಯಾರ್ಥಿಗಳು ಪರೀಕ್ಷೆಗಾಗಿ ಕಠಿಣ ತಯಾರಿ ನಡೆಸಿದ್ದರು. ಹಗಲಿರುಳು ಶ್ರಮ ಪಟ್ಟಿದ್ದರು. ಜತೆಗೆ ಉತ್ತಮ ಅಂಕ ಗಳಿಸುವ ವಿಶ್ವಾಸದಲ್ಲಿದ್ದರು. ಆದರೆ ಯಾರೋ ಮಾಡಿದ ತಪ್ಪಿಗೆ ಇವರ ಕನಸೆಲ್ಲ ಕಮರಿದ್ದು, ಜೀವವನ್ನೇ ಕಳೆದುಕೊಂಡಿದ್ದಾರೆ.
ಮೃತರಲ್ಲಿ ಬೆಂಗಳೂರು ಮೂಲದ ವಿದ್ಯಾರ್ಥಿಯೂ ಇದ್ದಾನೆ ಎನ್ನಲಾಗಿದ್ದು, ಆತ ಗೋವಾದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತನ ಗುರುತು ಪತ್ತೆಯಾಗಿಲ್ಲ. ಇನ್ನು ರಾಜಸ್ಥಾನದ ಪ್ರದೀಪ್ ಮೇಘ್ವಾಲ್ ಜೀವ ಕಳೆದುಕೊಂಡಿದ್ದು, ಆತ 720ಕ್ಕೆ 650 ಅಂಕ ಗಳಿಸುವ ವಿಶ್ವಾಸದಲ್ಲಿದ್ದ. ಆತ್ಮಹತ್ಯೆ ಮಾಡಿಕೊಂಡ ಇತರ ಇಬ್ಬರನ್ನು ಉತ್ತರ ಪ್ರದೇಶದ ರಿತಿಕಾ ಮಿಶ್ರಾ ಮತ್ತು ದೆಹಲಿಯ ಅನ್ಶಿಕಾ ಪಾಂಡೆ ಎಂದು ಗುರುತಿಸಲಾಗಿದೆ.
